ಗದಗ: ಗದಗ ಬೆಟಗೇರಿ ಅವಳಿ ನಗರದಲ್ಲಿ ರಸ್ತೆಗಳು ಹದಗೆಟ್ಟಿದ್ದು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ಶೀಘ್ರವಾಗಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಗದಗ ಮತಕ್ಷೇತ್ರದ ಶಾಸಕ ಹೆಚ್ ಕೆ ಪಾಟೀಲ್ ಮನವಿ ಮಾಡಿದ್ದಾರೆ.
ಈ ಕುರಿತು ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವ ಶಾಸಕರು, ಹದಗೆಟ್ಟಿರುವ ರಸ್ತೆಗಳಿಂದಾಗಿ ಸಾರ್ವಜನಿಕರು ಎಲ್ಲಿ, ಯಾವ ರೀತಿ ಅಪಘಾತಗಳಾಗುತ್ತವೆಯೋ ಎಂಬ ಭಯದಿಂದಲೇ ಸಂಚರಿಸುವಂತಾಗಿದೆ. ಕೆಲವೆಡೆ ಸಂಚಾರವೇ ದುಸ್ತರವಾಗಿದೆ. ಹೀಗಾಗಿ, ಯುದ್ಧೋಪಾದಿಯಲ್ಲಿ ಅವಳಿ ನಗರದ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಿ ವಾಹನ ಮತ್ತು ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ವಿನಂತಿಸಿದ್ದಾರೆ.