ಗದಗ :ರೈತರ ಮೇಲೆ ಕಾರು ಹರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರನ ಮೇಲೆ ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಕೇಂದ್ರ ಹಾಗೂ ಉತ್ತರಪ್ರದೇಶ ಸರ್ಕಾರ ನಿರ್ಲಜ್ಜ, ನಿರ್ಲಕ್ಷ್ಯ, ಸ್ಪಂದನರಹಿತ ಸರ್ಕಾರಗಳಾಗಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಶಾಸಕ ಹೆಚ್ ಕೆ ಪಾಟೀಲ್ ಅವರು ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಮತ್ತು ಯುಪಿ ಸರ್ಕಾರದ ವಿರುದ್ಧ ಶಾಸಕ ಹೆಚ್ ಕೆ ಪಾಟೀಲ್ ವಾಗ್ದಾಳಿ.. ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಮಗ ರೈತರ ಮೇಲೆ ಜೀಪ್ ಹಾಯಿಸಿ ಕೊಲೆ ಮಾಡಿದ್ದಾನೆ. ಈ ದುರ್ಘಟನೆ ಮಾನವೀಯತೆ ವಿರುದ್ಧದ ಕೃತ್ಯ. ಈವರೆಗೂ ಉತ್ತರಪ್ರದೇಶ ಸರ್ಕಾರ ಆಶಿಶ್ ಮಿಶ್ರಾರನ್ನು ಬಂಧಿಸಿಲ್ಲ. ಅಲ್ಲದೆ, ಪ್ರಧಾನಿ ಮೋದಿಯವರು ಸಹ ಅಜಯ್ ಕುಮಾರ್ ಮಿಶ್ರಾ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗೆಲುವು :ಸಿಂದಗಿ ಹಾಗೂ ಹಾನಗಲ್ಲ ಕ್ಷೇತ್ರದಲ್ಲಿ ಜನರ ಸ್ಪಂದನೆ ಕಾಂಗ್ರೆಸ್ ಪಕ್ಷದ ಮೇಲಿದೆ. ಇವೆರಡು ಕ್ಷೇತ್ರಗಳಲ್ಲಿ ದೊಡ್ಡಮಟ್ಟದ ಲೀಡ್‌ನಿಂದ ಗೆಲ್ಲುತ್ತೇವೆ ಎಂದು ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟ ಸರ್ಕಾರ :ಒಬ್ಬ ಡ್ರೈವರ್ ಕಮ್ ಕಂಡಕ್ಟರ್ ಬಳಿ ನಾಲ್ಕು ಸಾವಿರ ಕೋಟಿ ಸಿಗುತ್ತೆ ಅಂದ್ರೆ ಹೇಗೆ..? ಅದು ಎಲ್ಲಿಂದ ಬಂತು.? ಕಿರಾಣಿ ಅಂಗಡಿಯಿಂದ ಬಂದು ಬೀಳುತ್ತಾ? ಅದು ಸರ್ಕಾರ ಹಾಗೂ ಜನರ ದುಡ್ಡು. ತೆರಿಗೆ ಹಣ ಕೆಲವರ ಪಾಲಾಗಿದೆ. ನಮ್ಮ ರಾಜ್ಯದಲ್ಲಿ ಯಾವ ಪ್ರಮಾಣದ ಭ್ರಷ್ಟ ಸರ್ಕಾರ ಇದೆ ಅನ್ನೋದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ. ಭ್ರಷ್ಟರ ವಿರುದ್ಧ ತನಿಖೆ ಆಗಲೇಬೇಕು ಎಂದು ಹೆಚ್ ಕೆ ಪಾಟೀಲ್ ಅವರು ಗುಡುಗಿದರು.