ಗದಗ: ಜಿಲ್ಲೆಯ ರೋಣ ಪಟ್ಟಣದಲ್ಲಿ ನಿನ್ನೆ(ಮಂಗಳವಾರ) ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಶಾಸಕ ಹೆಚ್.ಕೆ ಪಾಟೀಲ್ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಸೋನಿಯಾ ಗಾಂಧಿಗೆ ಛತ್ರಿ ಹಿಡಿದಿದ್ದರು. ಆದರೆ ಖರ್ಗೆಯವರಿಗೆ ಛತ್ರಿ ಹಿಡಿದಿರಲಿಲ್ಲ ಅಂತೆಲ್ಲ ಪ್ರಧಾನಿಯವರು ಮಾತನಾಡಿದ್ದಾರೆ. ಸೋನಿಯಾ ಗಾಂಧಿಗೆ ಯಾವ ರೀತಿ ಗೌರವ ಕೊಡುತ್ತಾರೋ ಅದೇ ರೀತಿ ಖರ್ಗೆ ಅವರಿಗೂ ಗೌರವ ಕೊಡುತ್ತಾರೆ. ಖರ್ಗೆಯವರು ಬರುತ್ತಾರೆ ಅಂದ್ರೆ 5 ನಿಮಿಷ ಅವರಿಗಾಗಿ ಸೋನಿಯಾ ಗಾಂಧಿ ಮೊದಲೇ ಬಂದು ಕಾಯುತ್ತಿದ್ದರು. ಇದಕ್ಕೆ ವೇದಿಕೆ ಮೇಲಿರುವ ಸಿದ್ದರಾಮಯ್ಯನವರು ಸಹ ಸಾಕ್ಷಿಯಾಗಿದ್ದರು. ಆದರೆ ಅಡ್ವಾಣಿಯವರು ವೇದಿಕೆ ಮೇಲೆ ನಿಮಗೆ ನಮಸ್ಕಾರ ಮಾಡಿದ್ರೆ ಪುನಃ ಅವರಿಗೆ ನಮಸ್ಕಾರ ಮಾಡುವ ಸಂಸ್ಕೃತಿ ನಿಮಗಿಲ್ಲ ಎಂದು ಮೋದಿಗೆ ತಿರುಗೇಟು ನೀಡಿದರು.
ಮೊನ್ನೆ ಪ್ರಧಾನಿಯವರು ಬೆಳಗಾವಿ ಹಾಗೂ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಆದರೆ ಅವರು ಜನರ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ. ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆಯೂ ಮಾತನಾಡಲಿಲ್ಲ. ಬೆಳಗಾವಿಯಲ್ಲಿ ಮಹದಾಯಿ ಬಗ್ಗೆ ಉಸಿರು ಬಿಟ್ಟಿದ್ದು ಕೇಳಿದ್ರಾ?. ಮೊನ್ನೆ ಜಂಬ ಕೊಚ್ಚಿಕೊಂಡು ಆಯೋಗ ರಚನೆ ಮಾಡಿದ್ದೇವೆ ಎಂದರು. ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸಿದ್ರಿ. ಮಹದಾಯಿಯನ್ನು ತಕ್ಷಣ ಆರಂಭ ಮಾಡ್ತೀವಿ. ಅರಣ್ಯ ಇಲಾಖೆಯಿಂದ ಅನುಮತಿ ಬೇಕಾಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ರು. ನಾವೇ ಅನುಮತಿ ಕೊಡವವರು. ಅರ್ಜಿ ಕೊಡಬೇಕಾಗಿಲ್ಲ ಅಂತಾ ಹೇಳಿದ್ರು. ಆದರೆ ಎರಡು ದಿನದಲ್ಲಿ ಮತ್ತೆ ಯಾಕ ಅರ್ಜಿ ಹಾಕಿದ್ರಿ? ಎಂದು ಪ್ರಶ್ನೆ ಮಾಡಿದರು.
ವಚನಭ್ರಷ್ಟ ಮೋದಿ:ಗದಗ ಜಿಲ್ಲೆಗೆ ಮೋದಿ ಬಂದಾಗ ಏನ್ ಹೇಳಿದ್ರು. ರಾಜ್ಯ, ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದಾಗ ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸುತ್ತೇವೆ ಅಂತ ವಚನ ಕೊಟ್ಟಿದ್ದರು. ಈಗ ವಚನ ಭ್ರಷ್ಟರಾಗಲಿಲ್ಲವೇ?. ಶ್ರೀಮಂತರಿಗೆ 15 ಲಕ್ಷ ಅಂದ್ರೆ ಬಾಯಾಗ ನೀರು ಬರೋವಾಗ ಬಡವನಿಗೆ ಏನು ಅನಿಸಿರಬಹುದು?. ವಚನ ಭ್ರಷ್ಟ ಮೋದಿ ಎಂಬುದಕ್ಕೆ ಇನ್ನೊಂದು ಪುರಾವೆ ಬೇಕೆ?. ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿನಿ ಎಂದಿದ್ದರು. ಆದರೆ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿನ 70 ಲಕ್ಷ ಉದ್ಯೋಗಗಳು ಕಡಿತವಾಗಿವೆ ಎಂದು ಎಚ್ ಕೆ ಪಾಟೀಲ್ ದೂರಿದರು.
ಬಿಜೆಪಿ ವಿರುದ್ಧ ವಾಗ್ದಾಳಿ: ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಭಾಷಣದುದ್ದಕ್ಕೂ ಕೆಂಡಕಾರಿದ ಅವರು, ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಡವರ ಸರ್ಕಾರವೆಂದು ಹೇಳಿ ಕಳೆದ ಎರಡು ವರ್ಷದಿಂದ ಕೃಷಿ ಭಾಗ್ಯ ನಿಲ್ಲಿಸಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಅಂತ ಹೇಳಿ ಆದಾನಿ, ಅಂಬಾನಿ ಅವರ ಆದಾಯ ದುಪ್ಪಟ್ಟು ಮಾಡಿದ್ದಾರೆ. ಯಡಿಯೂರಪ್ಪ ರೈತರ ಮಗ ಅಂದ್ರು. ಯಾಕೆ ರೈತರ ಸಾಲ ಮನ್ನಾ ಮಾಡಲಿಲ್ಲ?. ಈ ಬಗ್ಗೆ ಕೇಳಿದರೆ ನಮ್ಮ ಬಳಿ ನೋಟು ಪ್ರಿಂಟ್ ಮಾಡುವ ಮಷಿನ್ ಇದೆಯಾ ಎಂದು ನಮ್ಮನ್ನೇ ಪ್ರಶ್ನೆ ಮಾಡಿದ್ದರು. ಹಾಗಾದರೆ ನಾವು ಕೃಷಿ ಪದ್ಧತಿ ಸ್ವಸಹಾಯ ಸಾಲಮನ್ನಾ ಮಾಡಿದೆವೆಲ್ಲ ಆಗ ನಮ್ಮಲ್ಲಿ ನೋಟ್ ಪ್ರಿಂಟ್ ಮಾಡುವ ಮಷಿನ್ ಇತ್ತಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.