ಗದಗ:ರಾಜ್ಯ ಸರ್ಕಾರ ಕಡತಗಳನ್ನ ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ನಗರದ ಪ್ರವಾಸಿ ಮಂದಿರದಲ್ಲಿ ಮಾತಾನಾಡಿದ ಅವರು, ಈಗಾಗಲೇ 1 ಲಕ್ಷದ 7 ಸಾವಿರ ಕಡತಗಳು ವಿಲೇವಾರಿಯಾಗದೆ ಹಾಗೇ ಉಳಿದಿವೆ. ಕಡತಗಳು ಪೆಂಡಿಂಗ್ ಉಳಿದರೆ ಸಹಜವಾಗಿ ಭ್ರಷ್ಟಾಚಾರ ಹೆಪ್ಪುಗಟ್ಟಿ ಆಡಳಿತ ಕುಸಿಯುತ್ತದೆ. ಇದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತವೆ. ತಕ್ಷಣವೇ ಸರ್ಕಾರ ಕಡತಗಳ ವಿಲೇವಾರಿ ಮಾಡಬೇಕೆಂದು ಆಗ್ರಹಿಸಿದರು.
ಅಲ್ಲದೇ ಹಿಂದೆ ಕಾಂಗ್ರೆಸ್ ಸರ್ಕಾರ ಕಡತ ಯಜ್ಞ ಮಾಡುವ ದೊಡ್ಡ ಪ್ರಯತ್ನ ನಡೆಸಿತ್ತು. ಆ ಪ್ರಯತ್ನ ಬಿಜೆಪಿ ಸರ್ಕಾರ ಸಹ ಮಾಡಬೇಕು. ಯಡಿಯೂರಪ್ಪ ಸರ್ಕಾರದಲ್ಲಿ ಆರಂಭದಲ್ಲಿ ಕಡತಗಳು ವೆಬ್ಸೈಟ್ನಲ್ಲಿ ಅಪ್ಲೋಡ್ ಆಗುತ್ತಿದ್ದವು. ಈಗ ಆಗ್ತಾ ಇಲ್ಲ. ಅದನ್ನ ಗಮನಿಸಿದರೆ ಪಾರದರ್ಶಕತೆ ಮುಗಿದ ಕಥೆ ಅನ್ನೋ ಹಾಗಾಗಿದೆ. ಹೀಗಾಗಿ ಪಾರದರ್ಶಕ ಹಾಗೂ ಕಡತಗಳ ವಿಲೇವಾರಿ ಮಾಡಲು ಸರ್ಕಾರ ಹೊಸ ಪ್ರಯೋಗ ಮಾಡಬೇಕು ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.
ಇದೇ ವೇಳೆ ರಾಜ್ಯ ಸರ್ಕಾರ ಜೂಜು ಕೇಂದ್ರ ತೆರಯುವ ಚಿಂತನೆ ಬಗ್ಗೆ ಪ್ರತಿಕ್ರಿಯಿಸಿ, ಜೂಜಿನ ಮೂಲಕ ಜನರನ್ನು ಆಕರ್ಷಣೆ ಮಾಡುವ ಆಲೋಚನೆ ಕರ್ನಾಟಕದ ಸಂಸ್ಕೃತಿಗೆ ವ್ಯತಿರಿಕ್ತವಾದದ್ದು ಹಾಗೂ ವಿರೋಧವಾದದ್ದು. ಸಚಿವ ಸಿ.ಟಿ.ರವಿ ಅವರ ಈ ಆಲೋಚನೆಯನ್ನು ನಾನು ಖಂಡಿಸುತ್ತೇನೆ. ಆದಾಯ ಹೆಚ್ಚಿಸೋ ಸಲುವಾಗಿ ಜನರನ್ನು ಕೆಡಿಸುವುದು ಸರಿನಾ ಎಂದು ಪ್ರಶ್ನೆ ಮಾಡಿದ ಅವರು, ಸಚಿವ ಸಿ.ಟಿ.ರವಿ ಹೇಗೆ ಅಲೋಚನೆ ಮಾಡಿದ್ದಾರೋ ಗೊತ್ತಿಲ್ಲ. ಇದೊಂದು ಸಮಾಜದ್ರೋಹಿ ಚಿಂತನೆ ಎಂದು ಕಿಡಿಕಾರಿದರು.