ಗದಗ : ಗದಗ-ಬೆಟಗೇರಿ ನಗರಸಭೆಯಲ್ಲಿ ಚುನಾವಣೆ ಬಳಿಕ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಆದರೆ ಮೊದಲ ಬಜೆಟ್ ನಲ್ಲಿ ಬಿಜೆಪಿ ಆಡಳಿತದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಬಜೆಟ್ ಅಧಿವೇಶನದಲ್ಲಿ ಹೈಮಾಸ್ಕ್ ಲೈಟ್ ಅಳವಡಿಕೆಯಲ್ಲಿ ಭಾರಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಈ ವಿಷಯದಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ ನಡೆದಿದ್ದು, ಅಧ್ಯಕ್ಷೆ, ಪೌರಾಯುಕ್ತರ ವಿರುದ್ಧ ಘೋಷಣೆ ಕೂಗಲಾಗಿದೆ.
ಗದಗ -ಬೆಟಗೇರಿ ನಗರಸಭೆಯ ಮೊದಲ ಬಜೆಟ್ ಮಂಡಿಸಲಾಯಿತು. ಈ ವೇಳೆ ಬಜೆಟ್ ಮಂಡನೆಯ ವಿಷಯಕ್ಕಿಂತ ಹೆಚ್ಚು ಚರ್ಚೆಯಾಗಿದ್ದು ಹೈ ಮಾಸ್ಕ್ ಲೈಟ್ ಅಳವಡಿಕೆ ವಿಚಾರ. ಯಾವುದೇ ಟೆಂಡರ್ ಕರೆಯದೇ ಅವಳಿ ನಗರಗಳಲ್ಲಿ ಅಕ್ರಮವಾಗಿ ಸುಮಾರು 7 ಹೈ ಮಾಸ್ಕ್ ದೀಪಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಇದನ್ನು ಅಧಿಕಾರಿಗಳೇ ಅಳವಡಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡಿದ್ದಾರೆ. ವಿಪರ್ಯಾಸ ಎಂದರೆ ಈ ಹೈಮಾಸ್ಕ್ ಲೈಟ್ ಅಳವಡಿಕೆ ವಿಚಾರ ಸ್ವತಃ ಆಡಳಿತರೂಢ ಬಿಜೆಪಿಯ ಸದಸ್ಯರಿಗೆ ತಿಳಿದಿರಲಿಲ್ಲವಂತೆ. ಹೀಗಾಗಿ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರೂ ಅಧ್ಯಕ್ಷೆಯ ನೆರವಿಗೆ ಯಾರೊಬ್ಬ ಬಿಜೆಪಿ ಸದಸ್ಯರು ಬಂದಿಲ್ಲ. ಕಾಂಗ್ರೆಸ್ ಸದಸ್ಯರ ಪ್ರಶ್ನೆಗಳ ಸುರಿಮಳೆಗೆ ಅಧ್ಯಕ್ಷೆ ಉಷಾ ದಾಸರ್, ಪೌರಾಯುಕ್ತ ರಮೇಶ ಸುಣಗಾರ ಕಕ್ಕಾಬಿಕ್ಕಿಯಾದರು.
ನಗರಸಭೆಯ ಅನುದಾನದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈ ಮಾಸ್ಕ್ ಲೈಟ್ ಅಳವಡಿಕೆ ಮಾಡಲಾಗುತ್ತಿದೆ. ಇದು ಯಾರ ಗಮನಕ್ಕೂ ತರದೆ ಖುದ್ದು ಅಧಿಕಾರಿಗಳೇ ಮಾಡುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಇದರಲ್ಲಿ ಏನೋ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿ ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿ ಅಧಿವೇಶನವನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ.