ಗದಗ:ಜಿಲ್ಲೆಯಲ್ಲಿ ಮಳೆರಾಯ ಮತ್ತೆ ಅಬ್ಬರಿಸಿದ್ದಾನೆ. ಗದಗ-ಬೆಟಗೇರಿಯಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆ ಸಾಕಷ್ಟು ಅವಾಂತರಗಳನ್ನ ಸೃಷ್ಟಿ ಮಾಡಿದೆ. ಅದರಲ್ಲೂ ಬೆಟಗೇರಿಯ ದೇವರ ದಾಸಿಮಯ್ಯ ವೃತ್ತದ ಬಳಿಯ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ರಾತ್ರಿಯಿಡೀ ಮಳೆನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿನ ವಸ್ತುಗಳು ನೀರುಪಾಲಾಗಿವೆ.
ಪಕ್ಕದ ಚರಂಡಿ ತುಂಬಿ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿನ ಮಹಿಳೆಯರು, ವೃದ್ಧರು ಇಡೀ ರಾತ್ರಿ ಊಟ ನಿದ್ರೆ ಇಲ್ಲದೇ ಮಳೆ ನೀರು ಹೊರಹಾಕುವುದರಲ್ಲೇ ಕಾಲ ಕಳೆದಿದ್ದಾರೆ. ಅದರಲ್ಲೂ ಸುಮಾರು 8 ಮನೆಗಳು ಬಿದ್ದು ದುಡಿದು ತಿನ್ನೋ ವೃದ್ಧ ದಂಪತಿ ಒದ್ದಾಡುತ್ತಿದ್ದ ದೃಶ್ಯ ಮನಕಲಕುವಂತಿದೆ. ಕೂರಲು, ಮಲಗಲು, ಅಡುಗೆ ಮಾಡಲು ಸಹ ಆಸ್ಪದ ಇಲ್ಲದಂತ ಪರಿಸ್ಥಿತಿ ಎದುರಾಗಿದೆ. ಎರಡು ದಿನಗಳಿಂದ ಸರಿಯಾದ ಊಟ ಸಿಕ್ಕಿಲ್ಲ. ನಿನ್ನೆ ಡಾ. ಪಂಡಿತ ಪುಟ್ಟರಾಜ್ ಗವಾಯಿಗಳ ಹುಟ್ಟುಹಬ್ಬದ ಪ್ರಯುಕ್ತ ಭಕ್ತರು ಮಾಡಿಸಿದ್ದ ಪ್ರಸಾದವನ್ನೇ ತಿಂದು ದಿನ ದೂಡಿದ್ದಾರಂತೆ.
ಉಳಿದುಕೊಳ್ಳಲು ನಮಗೆ ಸರಿಯಾದ ಮನೆಗಳಿಲ್ಲ. ಇಂದು ನಾಳೆ ಬೀಳೋ ಸೋರುವ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಈ ಏರಿಯಾಗೆ ಸರಿಯಾದ ಮೂಲ ಸೌಕರ್ಯಗಳನ್ನು ಮಾಡಿಲ್ಲ. ಇಷ್ಟೆಲ್ಲಾ ಆವಾಂತರ ಸೃಷ್ಟಿಯಾದ್ರೂ ಸಹ ನಗರಸಭೆಯ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಗಂಜಿ ಕೇಂದ್ರ ತೆರೆದು ಊಟದ ವ್ಯವಸ್ಥೆಯನ್ನಾದ್ರೂ ಮಾಡಿಲ್ಲ ಅಂತ ಇಲ್ಲಿನ ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.
ರಸ್ತೆ ಪಾಲಾದ ಅನ್ನಭಾಗ್ಯ ಅಕ್ಕಿ: ಅನ್ನಭಾಗ್ಯ ಯೋಜನೆಯ ಅಕ್ಕಿ ತುಂಬಿದ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಕ್ಕಿಯಲ್ಲ ರಸ್ತೆ ಪಾಲಾದ ಘಟನೆ ಸಹ ನಡೆದಿದೆ. ಗದಗದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಹೊರಟಿದ್ದ ಲಾರಿ ಲಕ್ಷ್ಮೇಶ್ವರ ಪಟ್ಟಣದ ಲಂಡಿ ಹಳ್ಳದ ಬಳಿ ರಸ್ತೆ ಪಕ್ಕದ ಮರಕ್ಕೆ ಗುದ್ದಿದೆ. ಪರಿಣಾಮ ಲಾರಿಯ ಮುಂದಿನ ಬಂಪರ್ ಜಖಂಗೊಂಡಿದೆ.
ಜೊತೆಗೆ ಲಾರಿಯಲ್ಲಿದ್ದ ಅಕ್ಕಿ ಚೀಲಗಳು ನೆಲಕ್ಕೆ ಬಿದ್ದು ರಸ್ತೆಯಲ್ಲಿ ಚೆಲ್ಲಾಡಿವೆ. ಬೈಕ್ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮರಕ್ಕೆ ಡಿಕ್ಕಿ ಹೊಡೆದಿದೆ ಅಂತ ಹೇಳಲಾಗ್ತಿದೆ. ಇನ್ನು, ಲಾರಿ ಚಾಲಕ ಬಸವರಾಜ್ ಕರಕನಗೌಡರ ಎಂಬಾತನಿಗೆ ಕಾಲಿಗೆ ಗಾಯವಾಗಿದ್ದು, ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.