ಗದಗ :ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣದ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ಮಾಡಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಭಟನೆ - Outsourced Employees Wages-2020
ಸಮಾನ ಕೆಲಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದ ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿ ಆಯಾ ತಾಲೂಕಿನ ತಹಶೀಲ್ದಾರ್ ಹಾಗೂ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ 9 ದಿನಗಳಿಂದ ನಿರಂತರ ಹೋರಾಟ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರ ನಮ್ಮ ಮನವಿ ಆಲಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಮಾನ ಕೆಲಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗೆ ಒತ್ತಾಯಿಸಿ ಜಿಲ್ಲೆಯ ಗದಗ, ಲಕ್ಷ್ಮೇಶ್ವರ, ಶಿರಹಟ್ಟಿ, ಗಜೇಂದ್ರಗಡ ತಾಲೂಕಿನಲ್ಲಿಯೂ ಪ್ರತಿಭಟನೆ ಮಾಡಲಾಗುತ್ತಿದ್ದು, ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಕೊರೊನಾ ಹಾವಳಿ ನಡುವೆ ನಮ್ಮ ಪ್ರಾಣ ಪಣಕ್ಕಿಟ್ಟು ಕಾರ್ಯನಿರ್ವಹಿಸಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಆಳುವ ಸರ್ಕಾರಗಳು ಮಾತ್ರ ನಮ್ಮತ್ತ ಗಮನ ಹರಿಸುತ್ತಿಲ್ಲ. ಈ ಕೂಡಲೇ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಖಾಯಂ ಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಆರೋಗ್ಯ ಇಲಾಖೆ ಎಲ್ಲ ಹುದ್ದೆಗಳಿಗೆ ವೇತನ ಭತ್ಯೆ ಮತ್ತು ವೇತನ ಶ್ರೇಣಿ ನೀಡಬೇಕು, ಆರೋಗ್ಯ ಭಾಗ್ಯ ಯೋಜನೆ ಸೇರಿದಂತೆ ಸರ್ಕಾರದ ಅನೇಕ ಯೋಜನೆಗಳು ಎಲ್ಲರಿಗೂ ಅನ್ವಯವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರು ಆಯಾ ತಾಲೂಕಿನ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.