ಗದಗ:ಮೋದಿ ಅಲೆ ಈ ಬಾರಿ ನಿರ್ನಾಮ ಆಗಬೇಕು. ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ ಎಲ್ಲವೂ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಹೆಚ್.ಕೆ ಪಾಟೀಲ್ ಹೇಳಿದರು.
ತಾಲೂಕಿನ ಹುಲಕೋಟಿ ಕೆ.ಹೆಚ್.ಪಾಟೀಲ್ ಆಸ್ಪತ್ರೆಗೆ ಕುಟುಂಬ ಸಮೇತರಾಗಿ ಬಂದು ಕೊರೊನಾ ವ್ಯಾಕ್ಸಿನ್ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ವಿಷಯದ ಬಗ್ಗೆ ಮುಂಜಾಗ್ರತೆ ವಹಿಸಿ ಅಂತ ಸರ್ಕಾರಕ್ಕೆ ಕಿವಿಮಾತು ಹೇಳಿದರು. ಕೊರೊನಾ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು. ತಜ್ಞರು ಹೇಳಿರುವುದನ್ನು ಸರ್ಕಾರ ಗಂಭೀರವಾಗಿ ಪಾಲಿಸಬೇಕು. ಮೊದಲ ಬಾರಿ ಆದಂತೆ ಈ ಬಾರಿಯೂ ನಿರ್ಲಕ್ಷ್ಯ ಮಾಡಬೇಡಿ ಅಂತ ಸರ್ಕಾರಕ್ಕೆ ಸಲಹೆ ನೀಡಿದರು.
ನಂತರ ಪಂಚರಾಜ್ಯ ಚುನಾವಣೆ ಕುರಿತು ಮಾತನಾಡಿ, ಪಂಚರಾಜ್ಯ ಚುನಾವಣೆಯಿಂದ ಪ್ರಜಾಪ್ರಭುತ್ವದಲ್ಲಿ ಮಹತ್ವದ ಚುನಾವಣೆ ಆಗಬೇಕು. ಚುನಾವಣೆ ಮೌಲ್ಯಗಳನ್ನು ಅಲ್ಲಗಳೆಯುವ ರೀತಿಯಲ್ಲಿ ಬಿಜೆಪಿ ವಾತಾವರಣ ಸೃಷ್ಟಿ ಮಾಡ್ತಿದೆ. ಬಿಜೆಪಿ ಜನರಿಗೆ ತಪ್ಪು ತಿಳುವಳಿಕೆ ಮೂಡಿಸುತ್ತಿದೆ. ಚುನಾವಣೆ ನೀತಿಗೆ ವಿರುದ್ಧವಾದ ಧರ್ಮ, ಜಾತಿ, ದೇವರನ್ನು ನಡುವೆ ತರ್ತಿದ್ದಾರೆ. ಚುನಾವಣಾ ಆಯೋಗ ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಚುನಾವಣಾ ಆಯೋಗ ಹಲ್ಲು ಇಲ್ಲದ ಹಾವಿನಂತೆ ಸುಮ್ಮನೆ ಬಿದ್ದುಕೊಂಡಿದೆ. ಮೋದಿ ಅಲೆ ಈ ಬಾರಿ ನಿರ್ನಾಮ ಆಗಬೇಕು. ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ ಎಲ್ಲವೂ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೆ ಎಂದರು.