ಗದಗ:ರಾಜ್ಯದಲ್ಲಿನ ನೆರೆ ಪರಿಸ್ಥಿತಿ ಬಗ್ಗೆ ಕೇಂದ್ರದ ಗಮನಕ್ಕೆ ತರಲಾಗಿದೆ. ನಮ್ಮ ಸರ್ಕಾರವು ಪ್ರವಾಹದ ಬಗ್ಗೆ ಸೂಕ್ತ ಕ್ರಮಕ್ಕೆ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಪ್ರವಾಹ ಪೀಡಿತ ಪ್ರದೇಶ ಕೊಣ್ಣೂರಿಗೆ ಸಿಎಂ ಬಿಎಸ್ವೈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗದಗದ ರೋಣ, ನರಗುಂದದಲ್ಲಿ ಮಲಪ್ರಭ ಹಾಗೂ ಬೆಣ್ಣೆಹಳ್ಳದಲ್ಲಿನ ನೀರಿನ ಅಬ್ಬರದಿಂದ ನೆರೆ ಆವರಿಸಿದೆ. ಒಟ್ಟಾರೆ 27 ಗ್ರಾಮಗಳು ನೆರೆಗೆ ತುತ್ತಾಗಿವೆ. ಈ ಬಗ್ಗೆ ಕೇಂದ್ರದ ಗಮನಕ್ಕೆ ತರಲಾಗಿದ್ದು, ನಾಳೆ ಖುದ್ದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಆಗಮಿಸುತ್ತಿದ್ಧಾರೆ. ಅವರು ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಅವಲೋಕನ ನಡೆಸಲಿದ್ದಾರೆ ಎಂದು ತಿಳಿಸಿದರು.