ಗದಗ:ಕೊರೊನಾ ರೋಗಿಗಳಿಗೆ ಅಂತಾನೇ ಜಿಲ್ಲೆಯ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೆಂಟರ್ ತೆರೆಯಲಾಗಿದೆ. ಆದರೂ ಕೂಡಾ ಇಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬುದು ಸೋಂಕಿತರೊಬ್ಬರ ಸಹೋದರಿ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಆಕೆಯೂ ಕೂಡಾ ಸೋಂಕಿತೆಯಾಗಿದ್ದು, ಮೂರು ದಿನದಿಂದ ತನ್ನ ಸಹೋದರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರೂ ವೆಂಟಿಲೇಟರ್ ಅಳವಡಿಸದೇ ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪ ಮಾಡಿದ್ದಳು.
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಜಿಮ್ಸ್ ನಿರ್ದೇಶಕ ಪಿ.ಎಸ್.ಭೂಸರೆಡ್ಡಿ ನಮ್ಮಲ್ಲಿ ವೆಂಟಿಲೇಟರ್ಗಳಿಗೆ ಯಾವುದೇ ಸಮಸ್ಯೆ ಇಲ್ಲ. ರೋಗಿಯ ದೈಹಿಕ ಅವಶ್ಯಕತೆಗನುಗುಣವಾಗಿ ವೆಂಟಿಲೇಟರ್ ಅಳವಡಿಸಲಾಗುತ್ತದೆ. ರೋಗಿಗೆ ಯಾವಾಗ?, ಯಾವ ಬಗೆಯ ಚಿಕಿತ್ಸೆ ನೀಡಬೇಕು? ಎಂಬುದನ್ನು ವೈದ್ಯರು ನಿರ್ಧಾರ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಬಗೆಯ ವೆಂಟಿಲೇಟರ್ ಕೊರತೆಯಿಲ್ಲ ಎಂದಿದ್ದಾರೆ.