ಗದಗ: ಗದಗ ತಾಲೂಕಿನ ಯಲಿಶಿರೂರು ಅನ್ನೋ ಗ್ರಾಮದಲ್ಲಿ ಶೇ. 90ರಷ್ಟು ರೈತರು ವೀಳ್ಯದೆಲೆ ಬೆಳೆದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ವಿಚಿತ್ರ ಅಂದ್ರೆ ಜಿಲ್ಲೆಯ ಯಾವ ಭಾಗದಲ್ಲಿಯೂ ಬೆಳೆಯಲಾರದ ವೀಳ್ಯದೆಲೆಯನ್ನು ಈ ಗ್ರಾಮದ ಹೆಚ್ಚಿನ ರೈತರು ಬೆಳೆಯುತ್ತಿದ್ದಾರೆ.
10 ಗುಂಟೆ, 7 ಗುಂಟೆ, 20 ಗುಂಟೆ ಹೀಗೆ ಕಡಿಮೆ ಜಮೀನಿನಲ್ಲಿ ತಿಂಗಳಿಗೆ 40 ರಿಂದ 50 ಸಾವಿರ ರೂ. ವರೆಗೆ ಆದಾಯ ಗಳಿಸುತ್ತಿದ್ದಾರೆ. ಒಂದು ವರ್ಷಕ್ಕೆ ಬರೋಬ್ಬರಿ 4 ರಿಂದ 5 ಲಕ್ಷ ರೂ. ವರೆಗೆ ಆದಾಯ ರೈತರ ಕೈಗೆ ಸಿಗುತ್ತಿದೆ. ಇಲ್ಲಿ ಅತಿ ಹೆಚ್ಚು ವೀಳ್ಯದೆಲೆ ಬೆಳೆಯೋದ್ರಿಂದ ಈ ಊರಿಗೆ ಶಿವಪೂರ ಬದಲಾಗಿ ಯಲಿಶಿರೂರು ಅಂತ ಮರುನಾಮಕರಣ ಮಾಡಿದ್ದಾರೆ.
ಈ ವೀಳ್ಯದೆಲೆ ಬೆಳೆಯನ್ನು ಒಂದು ಸಾರಿ ನಾಟಿ ಮಾಡಿದರೆ ಸಾಕು. ಆದ್ರೆ ವೀಳ್ಯದೆಲೆ ಬೆಳೆಯೋದಕ್ಕೆ ಬೆಂಬಲವಾಗಿ ಬೆಳೆಸಿರೋ ಗಿಡಗಳು ನಾಶ ಆದ್ರೆ ಮಾತ್ರ ವೀಳ್ಯದೆಲೆ ಇಳುವರಿ ಕುಂಠಿತಗೊಳ್ಳುತ್ತದೆ. ಒಂದು ವೇಳೆ ಗಿಡಗಳು ನಾಶವಾದ್ರೆ ಹೊಸದಾಗಿ ಮತ್ತೆ ಮರು ನಾಟಿ ಮಾಡಬೇಕಾಗುತ್ತದೆ. ಯಾವುದೇ ರಾಸಾಯನಿಕ ಗೊಬ್ಬರ ಹಾಗೂ ಔಷಧಿ ಸಿಂಪಡಣೆ ಮಾಡದೇ ಕೇವಲ ಸಾವಯುವ ಗೊಬ್ಬರವನ್ನು ಹಾಕಿ ಅತಿ ಕಡಿಮೆ ಖರ್ಚಿನಲ್ಲಿ ವೀಳ್ಯದೆಲೆ ಬೆಳೆಯುತ್ತಾರೆ ಇಲ್ಲಿನ ರೈತರು.