ಗದಗ: ಗ್ರಾಮದಲ್ಲಿ ಒಂದು ಕಾಲದಲ್ಲಿ ಬರ ತಾಂಡವಾಡುತ್ತಿದ್ದು, ನೀರಿಗಾಗಿ ಹಾಹಾಕಾರ ಎದ್ದಿತ್ತು. ಜನ ಜಾನುವಾರು ನೀರಿಲ್ಲದೇ ಇಡೀ ಊರಿಗೆ ಊರೇ ದಾಹ ನೀಗಿಸಿಕೊಳ್ಳಲು ಹಾತೊರೆಯುತ್ತಿತ್ತು. ಯಾವ ಸರ್ಕಾರಗಳು ಮಾಡದ ಕೆಲಸವನ್ನ ತಾವೇ ಮಾಡಲು ಮುಂದಾದರು. ಕೊನೆಗೆ ಅವರು ಮಾಡಿದ ಪ್ರಯತ್ನ ಈಗ ಫಲ ನೀಡಿದ್ದು, ಇಡೀ ಊರಲ್ಲಿ ಜಲಧಾರೆ ಹರಿದಿದೆ.
ಗ್ರಾಮಸ್ಥರ ಒಗ್ಗಟ್ಟಿನ ಶ್ರಮಕ್ಕೆ ಇಂದು ಪ್ರತಿಫಲ, ಬರದ ನಾಡಿನ ದಾಹ ನೀಗಿಸಿದ ಜೀವಜಲ.. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿನ ನಾಲ್ಕು ಕೆರೆಗಳು ತುಂಬಿರುವ ದೃಶ್ಯ. ಅಂದಹಾಗೆ ಈ ಗ್ರಾಮದಲ್ಲಿ ಹಲವಾರು ವರ್ಷಗಳ ಹಿಂದೆ ಸಾಕಷ್ಟು ನೀರಿನ ಸಮಸ್ಯೆ ಇತ್ತು. ಈ ಪಟ್ಟಣದ ಸುತ್ತಮುತ್ತ ನದಿಗಳು ಇರದೇ ಇರುವುದರಿಂದ ಜಲ ಮೂಲಗಳೇ ಇಲ್ಲದಾಗಿತ್ತು. ಕುಡಿಯುವ ನೀರಿಗೆ, ದಿನಬಳಕೆಗೆ, ಜಾನುವಾರಗಳಿಗೆ ನೀರಿಲ್ಲದಂತಾಗಿತ್ತು. ಹಾಗಾಗಿ ಇಲ್ಲಿ ಹೈನುಗಾರಿಕೆಯು ಇಳಿಮುಖವಾಗಿತ್ತು.
ಹೀಗಾಗಿ ಇಲ್ಲಿನ ಕೆಲ ಮುಖಂಡರು ಮತ್ತು ರೈತರು ಸರ್ಕಾರದಿಂದ ಯಾವ ನಿರೀಕ್ಷೆ ಇಟ್ಟುಕೊಳ್ಳದೇ, ಧನಸಹಾಯ ಪಡೆಯದೆ ತಾವೇ ಕೈಯಿಂದ ಖರ್ಚು ಮಾಡಿ ಗ್ರಾಮದಲ್ಲಿ ಇರುವ ನಾಲ್ಕು ಕೆರೆಗಳ ಹೂಳು ತೆಗೆಯುವ ಕೆಲಸ ಮಾಡುವುದು ಅಂತ ನಿರ್ಧರಿಸಲಾಯಿತು. ಗ್ರಾಮದ ಅನ್ನದಾನೇಶ್ವರ ಸ್ವಾಮೀಜಿಯವರು ಸಹ ರೈತರ ಪ್ರಯತ್ನಕ್ಕೆ ಸಾಥ್ ಕೊಟ್ಟರು. ಹೀಗೆ ನಡೆದ ನಿರ್ಧಾರ ಕೊನೆಗೂ ಸುಮಾರು 6 ತಿಂಗಳು ಕಾಲ ಕೆರೆಯ ಹೂಳು ತೆಗೆಸಿದರು. ಟ್ರ್ಯಾಕ್ಟರ್, ಜೆಸಿಬಿಗಳೆಲ್ಲವೂ ರೈತರೇ ಖರ್ಚು ಮಾಡಿಸಿ ಹಗಲು-ಇರುಳು ಸೇರಿ ಅಂದು ಮಾಡಿದ ಪ್ರಯತ್ನ ಇಂದು ಫಲಿಸಿದೆ.
ಮುಖ್ಯವಾಗಿ ಈ ನಿರ್ಧಾರದ ಹಿಂದೆ ನೆಲಜಲ ಸಂರಕ್ಷಣಾ ಸಮಿತಿ ಅಂತ ಒಂದು ತಂಡ ಮಾಡಿಕೊಂಡರು. ಇದೇ ತಂಡದಿಂದ ಯೋಚಿಸಿದ ಈ ಹೂಳೆತ್ತುವ ಕೆಲಸ ಇಂದು ಗ್ರಾಮದಲ್ಲಿ ಜೀವಜಲ ಎಲ್ಲೆಂದರಲ್ಲಿ ಹರಿಯುವ ಹಾಗೆ ಆಗಿದೆ. ಸದ್ಯ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನಾಲ್ಕು ಕೆರೆಗಳು ಭರ್ತಿಯಾಗಿವೆ.