ಗದಗ:ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಕಂಡುಹಿಡಿಯುತ್ತಿರುವ ಔಷಧಿ ಪ್ರಯೋಗಕ್ಕೆ ತನ್ನದೇಹವನ್ನು ಬಳಸಿಕೊಳ್ಳುವಂತೆ ಜಿಲ್ಲೆಯ ಯುವಕನೊಬ್ಬ ಮನವಿ ಮಾಡಿದ್ದಾನೆ.
ಕೊರೊನಾ ಪ್ರಯೋಗಕ್ಕೆ ತನ್ನ ದೇಹವನ್ನು ಬಳಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ ಯುವಕ ಶಿರಹಟ್ಟಿ ತಾಲೂಕು ಬೆಳ್ಳಟ್ಟಿ ಗ್ರಾಮದ ವಿರೇಶ್ ಕುರವತ್ತಿ ಎಂಬ ಯುವಕ ಕೊರೊನಾ ಸಂಬಂಧ ನಡೆಯುತ್ತಿರುವ ಪ್ರಯೋಗಕ್ಕೆ ತನ್ನದೇಹವನ್ನು ಬಳಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾನೆ.
ಯುವಕ ವಿರೇಶ್ ಕುರುವತ್ತಿ ನರಸಾಪುರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಓದುತ್ತಿದ್ದು, ಎಬಿವಿಪಿ ಕಾರ್ಯಕರ್ತನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾನೆ.
ದೇಶಕ್ಕಾಗಿ ತನ್ನಿಂದ ಏನಾದರೂ ಸೇವೆ ಮಾಡಲು ಮನಸ್ಸು ಹಂಬಲಿಸುತ್ತಿತ್ತು. ಕೊನೆ ಪಕ್ಷ ಕೊರೊನಾ ವೈರಸ್ ಔಷಧಿ ಪ್ರಯೋಗಕ್ಕಾದರೂ ನನ್ನ ದೇಹ ದಾನ ಮಾಡಿ ವಿಶ್ವದಲ್ಲಿ ಆಗುತ್ತಿರುವ ಸಾವು-ನೋವುಗಳು ನಿಯಂತ್ರಣಕ್ಕೆ ಬರಲು ಸಹಕಾರಿಯಾಗುತ್ತದೆ ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾನೆ.
ಕೊರೊನಾ ವೈರಸ್ಗೆ ಔಷಧಿ ಕಂಡು ಹಿಡಿಯುವಾಗ ಮನುಷ್ಯರ ದೇಹದ ಅವಶ್ಯಕತೆ ಇದ್ದರೆ ನನ್ನ ದೇಹವನ್ನು ಪ್ರಯೋಗಕ್ಕಾಗಿ ದಾನ ಮಾಡಲು ಸಿದ್ಧವಿರುವುದಾಗಿ ಹೇಳಿದ್ದಾನೆ. ಅಲ್ಲದೆ, ಮಹಾಮಾರಿಯ ನಿಯಂತ್ರಣದ ವಿರುದ್ಧ ಹೋರಾಟ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿಗೆ ಯುವಕ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.