ಕರ್ನಾಟಕ

karnataka

ETV Bharat / state

ಮರಳಿ ಬಂದು ತಮ್ಮಂದಿರ ಮದುವೆ ಮಾಡ್ತೀನಿ ಅಂದಿದ್ದ ಯೋಧ... ಛತ್ತೀಸ್​​ಗಡದಲ್ಲಿ ಹುತಾತ್ಮ - ಯೋಧನ ಕುಟುಂಬಸ್ಥರ ಆಕ್ರಂದನ

ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮ ಯೋಧ ಛತ್ತೀಸ್​ಗಡದಲ್ಲಿ ಹುತಾತ್ಮರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಯೋಧ
ಯೋಧ

By

Published : Jul 21, 2021, 3:13 AM IST

ಗದಗ: ಇವರು ಕಳೆದ 12 ವರ್ಷಗಳಿಂದ ದೇಶ ಸೇವೆಗೈಯುತ್ತಿದ್ದ ಯೋಧ. ತಿಂಗಳ ಹಿಂದೆ ರಜೆ ಮೇಲೆ ಊರಿಗೆ ಬಂದು, ಬಳಿಕ ಮೇಲಾಧಿಕಾರಿಗಳ ಕರೆ ಮೇಲೆ ಮತ್ತೆ ಸೇವೆಗೆ ಹಾಜರಾಗಿದ್ದರು. ಮಂಗಳವಾರ ಬೆಳಿಗ್ಗೆ ಅಪ್ಪ-ಅಮ್ಮನ ಜೊತೆ ಖುಷಿ ಖುಷಿಯಾಗಿ ಫೋನ್​ನಲ್ಲಿ ಮಾತನಾಡಿದ್ರು. ಆ ಬಳಿಕ ಒಂದೇ ಗಂಟೆಯಲ್ಲಿ ಯೋಧ ಹುತಾತ್ಮನಾದ ಸುದ್ದಿ ಕುಟುಂಬಸ್ಥರಿಗೆ ಬರಸಿಡಿಲಂತೆ ಬಡಿದಿದೆ.

ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಯೋಧ ಲಕ್ಷ್ಮಣ್ಣ ಗೌರಣ್ಣವರ್ (30) ಛತ್ತೀಸ್​ಗ​ಡದಲ್ಲಿ ಕರ್ತವ್ಯದಲ್ಲಿದ್ದಾಗ ಗುಂಡು ತಾಗಿ ಹುತಾತ್ಮರಾಗಿದ್ದಾರೆ. ಸುದ್ದಿ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಯೋಧನನ್ನು ಕಳೆದುಕೊಂಡ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದಲ್ಲಿ ಮೌನ ಆವರಿಸಿದೆ.

ಯೋಧನ ತಂದೆ-ತಾಯಿಗೆ ಛತ್ತೀಸ್​​ಗ​ಡದ ಯೋಧರಿಂದ ಮಾಹಿತಿ ತಿಳಿದಿದ್ದು, ಸಾವಿನ ಕುರಿತು ನಿಖರ ಮಾಹಿತಿ ಪೋಷಕರಿಗಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ಬಂದಿಲ್ಲ. ಇನ್ನು ಯೋಧ ಕಳೆದ 15 ದಿನಗಳ ಹಿಂದೆಯಷ್ಟೇ ರಜೆ ಮೇಲೆ ಊರಿಗೆ ಬಂದಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಊರಲ್ಲಿ ರಜೆ ಕಳೆದು ಮರಳಿ ಸೇವೆಗೆ ಹಾಜರಾಗಿದ್ದರು. ಆದರೆ ಈಗ ದಿಢೀರ್ ಮಗನ ಸಾವು ಕುಟುಂಬಕ್ಕೆ ಸಹಿಸಿಕೊಳ್ಳಲಾಗ್ತಿಲ್ಲ.

ಇನ್ನು ಹುತಾತ್ಮ ಯೋಧನಿಗೆ ಪತ್ನಿ ಮತ್ತು ಮೂರು ಮಕ್ಕಳಿದ್ದಾರೆ. ಇಬ್ಬರು ತಮ್ಮಂದಿರಿದ್ದಾರೆ. ಇತ್ತೀಚೆಗೆ ರಜೆ ಮೇಲೆ ಬಂದಾಗ ತಮ್ಮಂದಿರಿಗೆ ಕನ್ಯೆ ನೋಡಿ ಮದುವೆ ನಿಶ್ಚಯಿಸಿ ಹೋಗಿದ್ದರು. ಮತ್ತೆ ರಜೆ ಮೇಲೆ ಮರಳಿ ಊರಿಗೆ ಬಂದು ತಮ್ಮಂದಿರ ಮದುವೆ ಮಾಡ್ತೀನಿ ಎಂದಿದ್ದರಂತೆ. ಇಡೀ ಮನೆ ಯೋಧ ಲಕ್ಷ್ಮಣ ಮೇಲೆ ಅವಲಂಬಿತವಾಗಿತ್ತು. ಆದರೆ ಈಗ ಮನೆ ಮಗ ಇಲ್ಲ ಅನ್ನೋದನ್ನು ಪೋಷಕರಿಗೆ ನಂಬಲು ಆಗುತ್ತಿಲ್ಲ.

ABOUT THE AUTHOR

...view details