ಕರ್ನಾಟಕ

karnataka

ETV Bharat / state

ಗದಗ: ಗವಿಸಿದ್ದೇಶ್ವರ ಜಾತ್ರೆ ಮುಗಿಸಿ ಬರುತ್ತಿದ್ದ ಇಬ್ಬರು ಅಪಘಾತದಲ್ಲಿ ಸಾವು - ಈಟಿವಿ ಭಾರತ ಕನ್ನಡ

ಗವಿಸಿದ್ದೇಶ್ವರ ಜಾತ್ರೆ ಮುಗಿಸಿ ಬರುತ್ತಿದ್ದ ಇಬ್ಬರು ಅಪಘಾತದಲ್ಲಿ ಸಾವು - ವಿಜಯಪುರದಲ್ಲಿ ಅಪ್ರಾಪ್ತ ಬಾಲಕ ಮೇಲೆ ನಾಯಿ ದಾಳಿ - ತುಮಕೂರಿನಲ್ಲಿ ಮನೆಗೆ ನುಗ್ಗಿದ ಚಿರತೆ - ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ರೈಲ್ವೆ ಉದ್ಯೋಗಿ ಬಂಧನ

gadag-road-accident-two-died-leapord-entered-the-house-at-tumkur
ಗವಿಸಿದ್ದೇಶ್ವರ ಜಾತ್ರೆ ಮುಗಿಸಿ ಬರುತ್ತಿದ್ದ ಇಬ್ಬರು ಅಪಘಾತದಲ್ಲಿ ಸಾವು : ತುಮಕೂರಿನಲ್ಲಿ ಮನೆಗೆ ನುಗ್ಗಿದ ಚಿರತೆ

By

Published : Jan 8, 2023, 11:01 PM IST

ಗದಗ :ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಮುಗಿಸಿ ಮರಳುತ್ತಿದ್ದ ಬೈಕ್ ಸವಾರರಿಬ್ಬರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಮೂಲತಃ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದ ಅಲ್ಲಾಸಾಬ್ ನಧಾಪ್, ರಂಜಾನ್ ಬೇಗಂ ಎಂದು ಗುರುತಿಸಲಾಗಿದೆ.

ಎರಡು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಈ ವೇಳೆ ರಸ್ತೆಗೆ ಬಿದ್ದ ಬೈಕ್​ ಸವಾರರ ಮೇಲೆ ಲಾರಿ ಹರಿದು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ. ಮೃತರು ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ ಮುಗಿಸಿಕೊಂಡು ಗದಗ ತಾಲೂಕಿನ ಕಣಗಿನಹಾಳಕ್ಕೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮುಂಡರಗಿ ತಾಲೂಕಿನ ಹಳ್ಳಿಗುಡ್ಡಿ ನಿವಾಸಿಗಳಾದ ಲಲಿತಾ, ಅಪ್ಪಣ್ಣ ಎಂಬವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರದಲ್ಲಿ ಅಪ್ರಾಪ್ತ ಬಾಲಕ ಮೇಲೆ ನಾಯಿ ದಾಳಿ : ಅಪ್ರಾಪ್ತ ಬಾಲಕನ ಮೇಲೆ ನಾಯಿಯೊಂದು ಮಾರಣಾಂತಿಕ ದಾಳಿ ನಡೆಸಿರುವ ಘಟನೆ ವಿಜಯಪುರ ನಗರದ ಅಸರ್‌ಮಹಲ್ ಬಳಿ ನಡೆದಿದೆ.‌ ಅಪ್ರಾಪ್ತ ಬಾಲಕನ ಮೂಗು ಸೇರಿದಂತೆ ಕೈ ಕಾಲಿಗೆ ಗಂಭೀರ ಗಾಯಗಳಾಗಿವೆ. ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಇನ್ನೂ ಅಪ್ರಾಪ್ತ ಬಾಲಕನ ಹೆಸರು ಹಾಗೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪಕ್ಕದ ಜಿಲ್ಲೆಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಜಯಪುರ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.‌

ತುಮಕೂರಿನಲ್ಲಿ ಮನೆಗೆ ನುಗ್ಗಿದ ಚಿರತೆ.. ಬಿಚ್ಚಿಬಿದ್ದ ಕುಟುಂಬ: ನಡುರಾತ್ರಿ ಮನೆಯೊಳಗೆ ಏಕಾಏಕಿ ಚಿರತೆ ನುಗ್ಗಿದ ಪರಿಣಾಮ ಮನೆಯಲ್ಲಿದ್ದವರು ಬೆಚ್ಚಿ ಬಿದ್ದಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಮುದ್ದುಲಿಂಗನದೋಡ್ಡಿ ಗ್ರಾಮದಲ್ಲಿ ನಡೆದಿದೆ. ಶಿವಣ್ಣ ಎಂಬುವವರ ಮನೆಗೆ ಚಿರತೆ ನುಗ್ಗಿದ್ದು, ಮನೆಯವರು ಕಕ್ಕಾಬಿಕ್ಕಿಯಾಗಿದ್ದಾರೆ. ತಕ್ಷಣ ಮನೆ ಮಂದಿಯೆಲ್ಲ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬಳಿಕ ಮನೆಯ ಬಾಗಿಲು ಹಾಕಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಶನಿವಾರ ತಡರಾತ್ರಿ 11.30ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಆರ್ ಎಫ್.ಒ ಮೊಹಮ್ಮದ್ ಮನ್ಸೂರ್ ಹಾಗೂ ಸಿಬ್ಬಂದಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಒಂದು ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿದಿದ್ದಾರೆ.

ತುಮಕೂರಿನಲ್ಲಿ ಮನೆಗೆ ನುಗ್ಗಿದ ಚಿರತೆ

ಹುಬ್ಬಳ್ಳಿ: ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ರೈಲ್ವೆ ಉದ್ಯೋಗಿ ಬಂಧನ: ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ರೈಲ್ವೆ ಉದ್ಯೋಗಿಯನ್ನು ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಹಾಗೂ ಕೇಶ್ವಾಪುರ ಠಾಣೆಯ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಗದಗ್ ರಸ್ತೆಯ ಗೇಟ್​ವೇ ಬಾರ್ ಬಳಿಯಲ್ಲಿ ರೈಲ್ವೆ ಉದ್ಯೋಗಿಯಾಗಿರುವ ಸಾಧಿಕ್ ದಪೇದರ್ ಬಂಧಿತ ಆರೋಪಿ.

ಬಂಧಿತ ಆರೋಪಿ ಶನಿವಾರ ನಡೆಯುತ್ತಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಟಿ- ಟ್ವೆಂಟಿ ಪಂದ್ಯದ ಮೇಲೆ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್ಪೆಕ್ಟರ್ ವಿಶ್ವನಾಥ್ ಚೌಗಲೆ ಹಾಗೂ ಕೇಶ್ವಾಪುರ್ ಠಾಣೆಯ ಪಿಎಸ್ಐ ಸದಾಶಿವ ಕಾನಟ್ಟಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನಿಂದ 7200 ರೂ. ನಗದು ಸೇರಿದಂತೆ ಬೆಟ್ಟಿಂಗ್ ನಡೆಸಲು ಬಳಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೇಶ್ವಾಪುರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಶತಮಾನದ ಹಿಂದಿನ ದುಬಾರಿ ಬೆಲೆಯ ಟೆಲಿಸ್ಕೋಪ್​ ಮಾರಾಟ ಯತ್ನ: ಚಿಕ್ಕಮಗಳೂರಲ್ಲಿ ಆರೋಪಿ ಬಂಧನ

ABOUT THE AUTHOR

...view details