ಕರ್ನಾಟಕ

karnataka

ETV Bharat / state

ಗದಗದಲ್ಲಿದೆ ಪರಿಸರ ಸ್ನೇಹಿ ಅಂಚೆ ಕಚೇರಿ: ಇದರ ವಿಶೇಷತೆಗಳು ಹೀಗಿವೆ - ಕೈ ತೋಟ

ಮುದ್ರಣ ಕಾಶಿ ಗದಗ ನಗರದಲ್ಲಿರುವ ಅಂಚೆ‌ ಅಧೀಕ್ಷಕರ ಕಾರ್ಯಾಲಯ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಕಚೇರಿ ಸುತ್ತಮುತ್ತ ಕೈಗೊಂಡಿರುವ ಸ್ವಚ್ಛತಾ ಕಾರ್ಯ ಹಾಗೂ ಆವರಣದಲ್ಲಿ ನಿರ್ಮಿಸಲಾಗಿರುವ ಕೈ ತೋಟ ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ.

gadag post office maintaining cleaning and attractive public
ಗದಗದಲ್ಲಿದೆ ಪರಿಸರ ಸ್ನೇಹಿ ಅಂಚೆ ಕಚೇರಿ; ಇದರ ವಿಶೇಷತೆಗಳು ಹೀಗಿವೆ...

By

Published : Jun 4, 2020, 5:28 PM IST

ಗದಗ: ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳು ಅಂದಾಕ್ಷಣ ಕಚೇರಿಗೆ ಬಂದ ಸಾರ್ವಜನಿಕರು ಸ್ವಚ್ಛತೆ ಬಗ್ಗೆ ಏನಾದ್ರೂ ಒಂದು ದೂರು ನೀಡಿ ಹೋಗ್ತಾರೆ. ಆದರೆ ಮುದ್ರಣ ಕಾಶಿ ಗದಗ ನಗರದಲ್ಲಿರೋ ಕೇಂದ್ರಾಡಳಿತದ ಅಂಚೆ‌ ಅಧೀಕ್ಷಕರ ಕಾರ್ಯಾಲಯಕ್ಕೆ ಬರುವ ಸಾರ್ವಜನಿಕರು ಮಾತ್ರ ತಮ್ಮ ಕೆಲಸ ಮುಗಿದ ಮೇಲೂ ಸ್ವಲ್ಪ ಹೊತ್ತು ಕಚೇರಿ ಆವರಣದಲ್ಲಿಯೇ ವಿಶ್ರಮಿಸಿ ಹೋಗುವಂತಹ ವಾತಾವರಣವಿದೆ.

ಗದಗದಲ್ಲಿದೆ ಪರಿಸರ ಸ್ನೇಹಿ ಅಂಚೆ ಕಚೇರಿ: ಇದರ ವಿಶೇಷತೆಗಳು ಹೀಗಿವೆ

ಸಿಬ್ಬಂದಿಗೆ ಜನ ಶಹಬ್ಬಾಸ್​ಗಿರಿ ನೀಡಿ ಹೋಗ್ತಾರೆ. ಕಾರಣ ಕೇಂದ್ರ ಸರ್ಕಾರದ ಆದೇಶದಂತೆ ಸ್ವಚ್ಛ ಭಾರತ ಅಭಿಯಾನದ ಸಂಕಲ್ಪವನ್ನ ಇಲ್ಲಿನ ಸಿಬ್ಬಂದಿ ಚಾಚೂ ತಪ್ಪದೇ ಪಾಲಿಸಿದ್ದು, ಸರ್ಕಾರಿ ಉದ್ಯಾವನಗಳೂ ಸಹ ನಾಚುವಂತೆ ಇಲ್ಲಿ ಉದ್ಯಾನವನ ನಿರ್ಮಿಸಿದ್ದಾರೆ. ಇದಕ್ಕೆಲ್ಲಾ ಇಲ್ಲಿನ ಹಿರಿಯ ಅಧೀಕ್ಷಕ ಕೆ.ಬಸವರಾಜ ಅವರ ಪರಿಸರ ಆಸಕ್ತಿಯೇ ಕಾರಣವಂತೆ.

ತಮ್ಮ ಕರ್ತವ್ಯದ ನಡುವೆಯೂ ಇಲ್ಲಿನ ಸಿಬ್ಬಂದಿ ಕಚೇರಿ ಸ್ವಚ್ಛತೆ ಕಡೆಗೂ ಗಮನ ಹರಿಸಿದ್ದಾರೆ. ಆವರಣದಲ್ಲಿರೋ ಸ್ವಲ್ಪ ಜಾಗದಲ್ಲಿ ಪಾರಿವಾಳಗಳನ್ನ ಸಾಕಿದ್ದು, ಕಚೇರಿಗೆ ಬರೋ ಗ್ರಾಹಕರನ್ನ ಸೆಳೆಯುವಂತೆ ಮಾಡಿವೆ. ಇಡೀ ಆವರಣವೇ ಹಸಿರು ಹೊದಿಕೆಯಿಂದ ಕೂಡಿದ್ದು, ಪುಟ್ಟ ಆವರಣದಲ್ಲೇ ಮೀನು ಹಾಗೂ ಆಮೆಗಳ ತೊಟ್ಟಿ ನಿರ್ಮಿಸಲಾಗಿದೆ. ಜೊತೆಗೆ ಆಶ್ವರ್ಯವೆನಿಸುವಂತೆ ದೇವರಿಗೆ ಪ್ರಿಯವಾದ ಕಮಲದ ಹೂಗಳ ಗಿಡಗಳನ್ನು ತೊಟ್ಟಿಯ ಸುತ್ತ ನೆಟ್ಟಿರುವುದು ನೋಡುಗರ ಕಣ್ಮನ ಸೆಳೆಯುತ್ತದೆ. ಸೂರ್ಯನಿಗೂ ಸೆಡ್ಡು ಹೊಡೆಯುವಂತೆ ಅರಳಿ ನಿಂತಿರೋ ಈ ಕಮಲಗಳನ್ನ ನೋಡಿದರೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ.

ಬೋರ್‌ವೆಲ್ ಮೂಲಕ ಹನಿ ನೀರಾವರಿ ಪದ್ಧತಿಯನ್ನು ಇಲ್ಲಿ ಅಳವಡಿಸಲಾಗಿದ್ದು, ಕಬ್ಬು, ತೆಂಗು, ಗುಲಾಬಿ, ದಾಸವಾಳ ಹೀಗೆ ವಿವಿಧ ರೀತಿಯ 25ಕ್ಕೂ ಹೆಚ್ಚು ಹೂವಿನ ಗಿಡಗಳನ್ನ ಇಲ್ಲಿ ಬೆಳೆಸಲಾಗಿದೆ. ಕಚೇರಿಯ ಎಲ್ಲ ಸಿಬ್ಬಂದಿಯೂ ಪ್ರತಿ ಗುರುವಾರ ತಮ್ಮ ಕಚೇರಿ ಕೆಲಸ ಮುಗಿಸಿದ ಮೇಲೆ ಉದ್ಯಾನವನದಲ್ಲಿ ಎರಡು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಸಂಗ್ರಹವಾಗೋ ಕಸವನ್ನು ಶೇಖರಿಸಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಮೂಲಕ ಮರಳಿ ಉದ್ಯಾವನಕ್ಕೆ ಉಪಯೋಗಿಸುತ್ತಿದ್ದಾರೆ.

ಕೊಪ್ಪಳ ಹಾಗೂ ಗದಗ ಜಿಲ್ಲೆಗಳ ಆಡಳಿತ ವಿಭಾಗೀಯ ಕಚೇರಿ ಇದಾಗಿದ್ದು, ಉಳಿದ ತಾಲೂಕು ಶಾಖೆಗಳಲ್ಲೂ ಸಹ ಈ ಸ್ವಚ್ಛತೆಯ ಪಾಠವನ್ನು ಹೇಳಿಕೊಟ್ಟು ಹಸಿರು ಕಚೇರಿಗಳನ್ನಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಇದೆಲ್ಲವೂ ನಮ್ಮ ಆಸಕ್ತಿ, ಒಂದು ವರ್ಷದ ಶ್ರಮದಿಂದ ಸಾಧ್ಯ ಇಲ್ಲ. ನಿರಂತರ ಶ್ರಮವಿದ್ದಾಗ ಮಾತ್ರ ಈ ಯಶಸ್ಸು ಕಾಣೋಕೆ ಸಾಧ್ಯ ಎನ್ನುತ್ತಾರೆ ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಬಸವರಾಜ.

ABOUT THE AUTHOR

...view details