ಗದಗ:ಮೆಣಸಿನಕಾಯಿ ಬೆಳೆ ಕಾಯಲು ಇದ್ದ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಗೈದು ರುಂಡ ತೆಗೆದುಕೊಂಡು ಪರಾರಿಯಾಗಿರುವ ಘಟನೆನಿನ್ನೆ ರಾತ್ರಿ ಗದಗತಾಲೂಕಿನ ತಿಮ್ಮಾಪುರ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ಸಣ್ಣ ಹನಮಪ್ಪ ವಜ್ರದ (65) ಕೊಲೆಗೀಡಾದ ವ್ಯಕ್ತಿ.
ಬೆಳಗ್ಗೆ ಜಮೀನು ಮಾಲೀಕರು ಬಂದು ನೋಡಿದಾಗ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ. ಗುಡಿಸಲಿನಲ್ಲಿ ದೇಹ ಮಾತ್ರ ಕಂಡು ಬಂದಿದೆ. ತಕ್ಷಣ ಕೊಲೆಗೆ ಸಂಬಂಧಿಸಿದಂತೆ ಜಮೀನಿನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಗೀಡಾದ ಸಣ್ಣ ಹನಮಪ್ಪ ವಜ್ರದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಈ ಭೀಕರ ಕೊಲೆಯಿಂದ ಸುತ್ತಮುತ್ತಲಿನ ರೈತರು ಬೆಚ್ಚಿ ಬಿದ್ದಿದ್ದಾರೆ. ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ- ವಕೀಲ ಕೊಲೆ, ಮೂವರು ಆರೋಪಿಗಳ ಬಂಧನ:ಕಲಬುರಗಿಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ವಕೀಲ ಈರಣ್ಣಗೌಡ ಪಾಟೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಲ್ಲಿನಾಥ್ ತಂದೆ ಬಸಣ್ಣ ಉದನೂರ್ (45), ಭಾಗಣ್ಣ ಅಲಿಯಾಸ್ ಭಗವಾನ್ ತಂದೆ ಅವಣಪ್ಪ ಉದನೂರ್ (20), ಅವಣಪ್ಪ ತಂದೆ ಭಾಗವಂತರಾವ್ ಉದನೂರ್ (48) ಬಂಧಿತರು.