ಗದಗ:ಮಲಪ್ರಭಾ ಹಾಗೂ ಬೆಣ್ಣೆ ಹಳ್ಳದ ಪ್ರವಾಹದ ಅಬ್ಬರಕ್ಕೆ ತತ್ತರಿಸಿ ಹೋದ ನೆರೆ ಸಂತ್ರಸ್ತರ ಬದುಕು ಸದ್ಯ ಬೀದಿಪಾಲಾಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮಸ್ಥರ ಪರದಾಟವಂತೂ ಹೇಳತೀರದಾಗಿದೆ.
ಹೊಳೆ ಆಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ನುಗ್ಗಿದ ಪ್ರವಾಹದ ನೀರಿನಿಂದ ಜನರು ಜೀವ ಉಳಿಸಿಕೊಳ್ಳಲು ಎತ್ತರದಲ್ಲಿರೋ ಹೊಳೆ ಆಲೂರಿನ ರೈಲ್ವೆ ನಿಲ್ದಾಣಕ್ಕೆ ಹೋಗಿ ಠಿಕಾಣಿ ಹೂಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿಯೇ ಮಲಗೋ ವ್ಯವಸ್ಥೆ ಮಾಡಿಕೊಂಡ ನೆರೆ ಸಂತ್ರಸ್ತರು, ರಾತ್ರಿಯಿಡೀ ನಿಲ್ದಾಣದಲ್ಲಿ ಉಳಿದು ಪ್ರವಾಹಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಭಾಗದಲ್ಲಿ ಮೂರು ತಿಂಗಳಲ್ಲಿ ಮೂರನೇ ಬಾರಿ ಹೊಳೆ ಆಲೂರು, ಬಸರಕೋಡ, ಅಮರಗೋಳ, ಕುರುವಿನಕೊಪ್ಪ, ಗಾಡಗೋಳಿ ಗ್ರಾಮಗಳನ್ನೂ ಸುತ್ತುವರೆದು ಗ್ರಾಮಸ್ಥರನ್ನು ನೆರೆ ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ ನೂರಾರು ಕುಟುಂಬಗಳು ಊಟ, ನಿದ್ದೆ ಇಲ್ಲದೇ ಸಂಕಟ ಅನುಭವಿಸುತ್ತಾ ರೈಲ್ವೆ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ.
ಇನ್ನು ಗ್ರಾಮದ ಹೊಳೆ ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ಶಾಲೆಗೆ ನೀರು ನುಗ್ಗಿದ ಪರಿಣಾಮ ಶಾಲೆ ಸಂಪೂರ್ಣವಾಗಿ ಜಲಾವೃತವಾಗಿದೆ. ಅಂಧ ಮಕ್ಕಳನ್ನು ದೀಪಾವಳಿ ಹಬ್ಬಕ್ಕೆಂದು ಊರಿಗೆ ಕಳಿಸಿದ್ರಿಂದ ಯಾವುದೇ ತೊಂದರೆಯಾಗಿಲ್ಲ. ಗ್ರಾಮದ ಎಚ್ಚರೇಶ್ವರ ಪ್ರೌಢ ಶಾಲೆಯೂ ಸಹ ಜಲಾವೃತವಾಗಿದೆ. ಶಾಲೆ ಆರಂಭದ ದಿನವೇ ಶಾಲೆಗೆ ನೀರು ನುಗ್ಗಿದ್ದು, ವಿದ್ಯಾರ್ಥಿಗಳು ಆತಂಕಗೊಳ್ಳುವಂತೆ ಮಾಡಿದೆ.
ಇನ್ನೊಂದೆಡೆ ಹೊಳೆ ಮಣ್ಣೂರು ಗ್ರಾಮಕ್ಕೂ ಸಹ ಮಲಪ್ರಭಾ ಹಾಗೂ ಬೆಣ್ಣೆ ಹಳ್ಳದ ನೀರು ನುಗ್ಗಿದ ಪರಿಣಾಮ ಮನೆಗಳೆಲ್ಲವೂ ಜಲಾವೃತವಾಗಿವೆ. ಪ್ರವಾಹಕ್ಕೆ ಹೆದರಿ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಮನೆಯ ಸಾಮಾಗ್ರಿಗಳನ್ನು ಹೇರಿಕೊಂಡು ಗ್ರಾಮ ತೊರೆಯುತ್ತಿರೋ ದೃಶ್ಯಗಳು ಸಾಮಾನ್ಯವಾಗಿವೆ.
ಶಿರಹಟ್ಟಿ ತಾಲೂಕಿನ ಗೋವನಕೊಪ್ಪ ಗ್ರಾಮದ ಜವಳಿ ಹಳ್ಳದಲ್ಲಿ 68 ಕುರಿಗಳು ಕೊಚ್ಚಿ ಹೋಗಿವೆ. ಆದರೆ ವಿಚಿತ್ರ ಹಾಗೂ ಅದೃಷ್ಟ ಅಂದ್ರೆ ಆ ಕುರಿಗಳ ಹಿಂಡಿನಲ್ಲಿ ಎರಡೇ ಎರಡು ಕುರಿಗಳು ಜೀವ ಉಳಿಸಿಕೊಂಡಿವೆ. ಕುರಿಗಳು ಮಾಲತೇಶ್ ಆಲೂರು ಮತ್ತು ಪ್ರಕಾಶ ಚನ್ನದಾಸರ ಎಂಬವವರಿಗೆ ಸೇರಿದವುಗಳಾಗಿದ್ದು, ಶಿರಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.