ಗದಗ: ಪದೇ ಪದೇ ಪ್ರವಾಹ ಬಂದು ಗದಗ ಜಿಲ್ಲೆಯ ಲಖಮಾಪೂರ ಗ್ರಾಮದ ಜನರ ಜೀವನವೇ ಅಸ್ತವ್ಯಸ್ತವಾದರೂ ಸಹ, ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಸಬೇಕಾದ ಜಿಲ್ಲಾಡಳಿತದ ನಡೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ರಾತ್ರಿಯಿಡೀ ಚಳಿಯಲ್ಲಿ ನಡು ರಸ್ತೆಯಲ್ಲೇ ಕಾಲ ಕಳೆದ ನೆರೆ ಸಂತ್ರಸ್ತರು ಮಲಪ್ರಭಾ ನದಿಯ ಪ್ರವಾಹಕ್ಕೆ ಸತತ ಮೂರು ಬಾರಿ ಸಿಲುಕಿದ ಗ್ರಾಮಸ್ಥರಿಗೆ ಇದುವರೆಗೂ ಜಿಲ್ಲಾಡಳಿತ ತಾತ್ಕಾಲಿಕವಾಗಿ ಶೆಡ್ ಸಹ ನಿರ್ಮಾಣ ಮಾಡಿಕೊಟ್ಟಿಲ್ಲ. ಹೀಗಾಗಿ ಲಖಮಾಪೂರ ಗ್ರಾಮದ ಕೆಲವು ಕುಟುಂಬಗಳು ಬೀದಿಗೆ ಬಿದ್ದಿದ್ದು, ನಡು ರಸ್ತೆ ಮತ್ತು ಹೊಲದಲ್ಲಿ ಕತ್ತಲಲ್ಲಿ ಚಿಕ್ಕ ಮಕ್ಕಳು, ವೃದ್ಧರೆನ್ನದೇ ರಾತ್ರಿಯಿಡೀ ಚಳಿಯಲ್ಲಿ ಜೀವನ ಕಳೆದಿದ್ದಾರೆ. ಈ ದೃಶ್ಯಗಳು ಮಾನವ ಹಕ್ಕುಗಳ ಉಲ್ಲಂಘನೆಗೆ ಹಿಡಿದ ಕೈಗನ್ನಡಿ ಅಂದರೂ ತಪ್ಪಾಗಲಿಕ್ಕಿಲ್ಲ.
ಪ್ರತಿ ಬಾರಿ ಪ್ರವಾಹ ಬಂದಾಗಲೂ ಈ ಗ್ರಾಮದ ಜನರನ್ನು ನೆರೆ ಸಂತ್ರಸ್ತ ಕೇಂದ್ರಕ್ಕೆ ಸೇರಿಸುತ್ತಾರೆಯೇ ಹೊರತು ಶಾಶ್ವತ ಪರಿಹಾರ ಮಾಡಿಕೊಡುವ ಗೋಜಿಗೆ ಮಾತ್ರ ಹೋಗಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಸಿಸಿ ಪಾಟೀಲ್ರ ಸ್ವಕ್ಷೇತ್ರದ ಪರಿಸ್ಥಿತಿಯೇ ಹೀಗಾದರೆ ಇನ್ನು ಉಳಿದ ಪ್ರವಾಹ ಪೀಡಿತ ಗ್ರಾಮಗಳ ಪರಿಸ್ಥಿತಿ ಹೇಗೆ ಎನ್ನುವ ಅನುಮಾನ ಸಹ ಶುರುವಾಗಿದೆ.
ಇನ್ನೊಂದೆಡೆ ಗ್ರಾಮದ ಜನರು ತುತ್ತು ಅನ್ನಕ್ಕಾಗಿ ನೆರೆ ಸಂತ್ರಸ್ತರ ಕೇಂದ್ರಕ್ಕೆ ಹೋಗಬಹುದು, ಆದರೆ ನಮ್ಮ ದನ-ಕರುಗಳನ್ನು ಯಾರು ನೋಡಿಕೊಳ್ತಾರೆ? ನಮಗೆ ಶೆಡ್ ನಿರ್ಮಾಣ ಮಾಡಿಕೊಡಿ ಅಂತ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮಕ್ಕಳು, ವೃದ್ಧರನ್ನು ನಡುರಸ್ತೆ, ಹೊಲದಲ್ಲಿ ಮಲಗಿಸಿದ ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಎಂದು ರಾಜಕೀಯ ನಾಯಕರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.