ಗದಗ: ತುಂಬಿ ಉಕ್ಕಿ ಹರಿದ ಮಲಪ್ರಭೆ. ಗ್ರಾಮದ ತುಂಬೆಲ್ಲಾ ಎಲ್ಲಿ ನೋಡಿದರಲ್ಲಿ ಬರೀ ನೀರು ಹಾಗೂ ಕೆಸರು. ಮನೆಯೊಳಗಿನ ನೀರು ಹೊರ ಹಾಕಲು ಹರಸಾಹಸ ಪಡುತ್ತಿರುವ ಜನ. ಪ್ರವಾಹ ತಗ್ಗಿದ ನಂತರ ಸರೀಸೃಪಗಳು ಹಾಗೂ ಕಾಯಿಲೆಗಳ ಕಾಟ ಬೇರೆ. ಇದು ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಮಲಪ್ರಭಾ ನದಿಯ ಪ್ರವಾಹಕ್ಕೊಳಗಾದ ಗ್ರಾಮಗಳ ಜನರ ಪರಿಸ್ಥಿತಿ.
ಪ್ರವಾಹದಿಂದ ಮನೆಯೊಳಗೆ ನೀರು ನುಗ್ಗಿ ವಸ್ತುಗಳೆಲ್ಲಾ ಹಾನಿಗೊಳಗಾಗಿವಿವೆ. ರಸ್ತೆಗಳು ಕೆಸರುಮಯವಾಗಿವೆ. ಪ್ರವಾಹದ ನಂತರ ಈಗ ಹಾವು, ಚೇಳು, ಕಪ್ಪೆ, ಜರಿ ಹುಳುಗಳ ಭೀತಿ ಬೇರೆ ಎದುರಾಗಿದ್ದು, ಪರಿಹಾರ ಕೇಂದ್ರದಿಂದ ಮನೆಗಳಿಗೆ ಹಿಂದಿರುಗಲು ಜನ ಹಿಂದೇಟು ಹಾಕ್ತಿದ್ದಾರೆ. ಇದರ ಜೊತೆಗೆ ವಿವಿಧ ರೀತಿಯ ಕಾಯಿಲೆಗಳು ಬೇರೆ ವಕ್ಕರಿಸಿಕೊಳ್ಳುತ್ತಿವೆ. ಪದೇ ಪದೆ ಸಂಕಷ್ಟ ಎದುರಿಸುವುದಕ್ಕಿಂತ ಸುರಕ್ಷಿತ ಸ್ಥಳದಲ್ಲಿ ನಮಗೆ ಶಾಶ್ವತವಾದ ಸೂರು ಕಲ್ಪಿಸಿಕೊಡಿ ಎಂದು ನೊಂದ ಸಂತ್ರಸ್ತರು ಸರ್ಕಾರಕ್ಕೆ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.
ಸಂತ್ರಸ್ತರ ಸಂಕಷ್ಟಕ್ಕೆ ಕೊನೆ ಎಂದು? ಹುಬ್ಬಳ್ಳಿ-ವಿಜಯಪುರ ಮೂಲಕ ಸೊಲ್ಲಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ಕೊಣ್ಣೂರು ಬಳಿ ಸುಮಾರು 400 ಮೀಟರ್ ರಸ್ತೆ ಹಾಳಾಗಿದೆ. ಕಳೆದ ವರ್ಷ ಪ್ರವಾಹಕ್ಕೆ ಈ ರಸ್ತೆ ಕೊಚ್ಚಿ ಹೋಗಿತ್ತು. ಈ ಬಾರಿಯೂ ಅದೇ ರೀತಿ ಆಗಿದೆ. ಪ್ರವಾಹ ಬಂದಾಗಲೆಲ್ಲಾ ರಸ್ತೆಯ ಪರಿಸ್ಥಿತಿ ಇದೇ ರೀತಿ ಆಗುತ್ತಿದೆ. ಕಳೆದ ಬಾರಿ ಪ್ರವಾಹ ಬಂದಾಗ ರಸ್ತೆ ಹಾಳಾಗಿತ್ತು. ಈ ವೇಳೆ ಶಾಶ್ವತ ಮೇಲ್ಸೇತುವೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದರು. ಆಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸರ್ಕಾರಕ್ಕೆ ಎರಡೂವರೆ ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಕೇವಲ 98 ಲಕ್ಷ ರೂಪಾಯಿ ಬಿಡುಗಡೆ ಮಾಡಿತ್ತು. ಇದರಿಂದ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿತ್ತು. ಈ ವರ್ಷ ಮತ್ತೆ ಪ್ರವಾಹ ಬಂದು ರಸ್ತೆ ಕೊಚ್ಚಿ ಹೋಗಿದೆ. ಕಳೆದ ವರ್ಷ ವ್ಯಯಿಸಿದ ಲಕ್ಷಾಂತರ ರೂ. ಈಗ ನೀರಿನಲ್ಲಿ ಕೊಚ್ಚಿ ಹೋದಂತಾಗಿದೆ.
ಇನ್ನು ಜಿಲ್ಲೆಯ ಕೊಣ್ಣೂರ, ಲಖಮಾಪೂರ, ಅಮರಗೋಳ, ಹೊಳೆಮಣ್ಣೂರ, ಮೆಣಸಗಿ ಹಾಗೂ ಹೊಳೆಹಡಗಲಿ ಗ್ರಾಮಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಮನೆಗಳಿಗೆ ನೀರು ನುಗ್ಗಿರುವುದರಿಂದ ದವಸ ಧಾನ್ಯಗಳು ನೀರುಪಾಲಾಗಿವೆ. ಯಾಕಪ್ಪ ಈ ಮಳೆ ಬಂತು ಎನ್ನುವಂತಾಗಿದೆ ಎಂದು ಸಂತ್ರಸ್ತರು ಹೇಳುತ್ತಿದ್ದಾರೆ. ನಮಗೆ ಶಾಶ್ವತ ಸೂರು ಕಟ್ಟಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.