ಗದಗ: ಮೃತಪಟ್ಟಿದ್ದ ಗರ್ಭಿಣಿಯ ಗರ್ಭದಿಂದ ಶಸ್ತ್ರಚಿಕಿತ್ಸೆ ಮೂಲಕ ಜೀವಂತವಾಗಿ ಶಿಶುವನ್ನು ಹೊರತೆಗೆದ ಘಟನೆ ನವೆಂಬರ್ 4ರಂದು ನಗರದ ಹೃದಯಭಾಗದಲ್ಲೇ ಇರುವ ಸರ್ಕಾರಿ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ(Gadag hospital) ನಡೆದಿತ್ತು. ವೈದ್ಯರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ವೈದ್ಯರು ಇಂದು ನವಜಾತ ಶಿಶು(Infant)ವನ್ನು ಅದರ ತಂದೆಗೆ ಹಸ್ತಾಂತರ ಮಾಡಿದರು.
ಮೃತ ಗರ್ಭಿಣಿಯ ಗರ್ಭದಿಂದ ಹೊರತೆಗೆದ ಶಿಶು ಚೇತರಿಕೆ.. ತಂದೆಗೆ ಹಸ್ತಾಂತರ ಮೃತ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಗುವಿನ ಹಾರ್ಟ್ ಬೀಟ್ ಅರಿತ ವೈದ್ಯರು 10 ನಿಮಿಷದಲ್ಲಿ ಯಶಸ್ವಿ ಹೆರಿಗೆ ಮಾಡಿ ಶಿಶುವನ್ನು ಬದುಕಿಸಿದರು. ಆದರೆ, ಜನಿಸಿದ ನವಜಾತ ಶಿಶು ಸ್ಥಿತಿ ಗಂಭೀರವಾಗಿತ್ತು. 12 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ನವಜಾತ ಶಿಶುವಿಗೆ ಚಿಕಿತ್ಸೆ ನೀಡಲಾಯಿತು. ಸದ್ಯ ಶಿಶು ಸಂಪೂರ್ಣವಾಗಿ ಚೇತರಿಸಿಕೊಂಡಿದೆ.
ಹೀಗಾಗಿ ಡಿಎಂಎಂ ಆಸ್ಪತ್ರೆಯಲ್ಲಿ ವೈದ್ಯರು ಮಗುವನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆ ಮಾಡುವ ಮೂಲಕ ಮಗುವನ್ನು ಪೋಷಕರಿಗೆ ಹಸ್ತಾಂತರ ಮಾಡಿದ್ರು. ನೋವಿನ ನಡುವೆಯೂ ಖುಷಿಯಿಂದ ಮುದ್ದಾದ ಕಂದನನ್ನು ತಂದೆಯು ಮನೆಗೆ ಕರೆದೊಯ್ದುರು.
ಘಟನೆ:
ರೋಣ ತಾಲೂಕಿನ ಮುಶಿಗೇರಿಯ ಅನ್ನಪೂರ್ಣ ಅಬ್ಬಿಗೇರಿ ಎಂಬ ತುಂಬು ಗರ್ಭಿಣಿಗೆ ನವೆಂಬರ್ 4ರಂದು ಆರೋಗ್ಯದಲ್ಲಿ ಏರುಪೇರಾಗಿತ್ತು. ಇರುವ ಆಸ್ಪತ್ರೆಯೆಲ್ಲ ಅಲೆದಾಡಿ ಬಳಿಕ ಗದಗ ನಗರದ ಡಿಎಂಎಂ ಹೆರಿಗೆ ಆಸ್ಪತ್ರೆಗೆ ಬರೋವಷ್ಟರಲ್ಲಿ ಗರ್ಭಿಣಿ ಮೃತಪಟ್ಟಿದ್ದರು. ಆದ್ರೆ ಡಿಎಂಎಂ ಹೆರಿಗೆ ಆಸ್ಪತ್ರೆಯ ವೈದ್ಯರು ಸ್ಕ್ಯಾನಿಂಗ್ ಮಾಡಿ ನೋಡಿದಾಗ ಮಗುವಿನ ಹಾರ್ಟ್ ಬೀಟ್ ಬಡಿದುಕೊಳ್ಳುತ್ತಿರುವುದು ಗೊತ್ತಾಗಿತ್ತು. ತಕ್ಷಣ ಅಲರ್ಟ್ ಆದ ವೈದ್ಯರು ಆಪರೇಷನ್ ಮಾಡಿ ಕೆಲವೇ ನಿಮಿಷದಲ್ಲಿ ಜೀವಂತವಾಗಿ ಮಗುವನ್ನು ಹೊರತೆಗೆದಿದ್ದರು. ಚಿಕಿತ್ಸೆ ಬಳಿಕ ಶಿಶು ಪೂರ್ಣವಾಗಿ ಚೇತರಿಕೆ ಕಂಡಿದೆ. ಹೀಗಾಗಿ ಇಂದು ಅದರ ತಂದೆಗೆ ಹಸ್ತಾಂತರ ಮಾಡಲಾಗಿದೆ.
ಇದನ್ನೂ ಓದಿ:ಮೃತ ಗರ್ಭಿಣಿಯ ಗರ್ಭದಿಂದ ಜೀವಂತ ಮಗು ಹೊರತೆಗೆದ ಗದಗ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಮೆಚ್ಚುಗೆ
ಇಂದು ಆಸ್ಪತ್ರೆಯಲ್ಲಿದ್ದ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಆಸ್ಪತ್ರೆ ಆಡಳಿತಾಧಿಕಾರಿ ಡಾ. ಬಸನಗೌಡ ಕರಿಗೌಡರ ಕೇಕ್ ಕತ್ತರಿಸಿ ಎಲ್ಲ ಮಕ್ಕಳಿಗೆ ತಿನ್ನಿಸಿದ್ರು. ಈ ಸಂಭ್ರಮದ ವೇಳೆ ನವಜಾತ ಶಿಶುವನ್ನು ತಂದೆಗೆ ಹಸ್ತಾಂತರ ಮಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು.