ಗದಗ: ಮುಳುಗುಂದ ನಾಕಾ ಬಳಿ ಇರುವ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಬಸಪ್ಪ ಪೂಜಾರ್ ಅವರು ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಕೆಎಸ್ಆರ್ಟಿಸಿ ಇಲಾಖೆಯಲ್ಲಿ ದಿನಕ್ಕೊಂದು ವಿವಾದಗಳು, ರಗಳೆಗಳು ಹುಟ್ಟಿಕೊಳ್ಳುತ್ತಿವೆ. ಮುಳುಗುಂದ ನಾಕಾ ಬಳಿ ಇರೋ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಬಸಪ್ಪ ಪೂಜಾರ್ ಅವರು ಕಂಡಕ್ಟರ್, ಡ್ರೈವರ್ಗಳಿಗೆ ದಿನನಿತ್ಯ ವಿನಾಕಾರಣ ತೊಂದರೆ, ಕಿರುಕುಳ ನೀಡ್ತಿದ್ದಾರೆ ಎಂದು ಆರೋಪಿಸಿ ಬಸ್ ಡಿಪೋದಲ್ಲಿಯೇ ಸಿಬ್ಬಂದಿ ವರ್ಗ ಮ್ಯಾನೇಜರ್ ವಿರುದ್ಧ ಕಿಡಿಕಾರಿದ್ದು, ಪ್ರತಿಭಟನೆ ಮೂಲಕ ಅವರ ವರ್ತನೆಯನ್ನು ಖಂಡಿಸಿದ್ದಾರೆ.
ಕೆಎಸ್ಆರ್ಟಿಸಿ ಸಿಬ್ಬಂದಿ ಪ್ರತಿಭಟನೆ ನಿತ್ಯ ಬೆಳಗ್ಗೆ ಕೆಲಸಕ್ಕೆ ಹಾಜರಾದ್ರೂ ಕೂಡಾ ಸಂಜೆವರೆಗೂ ಸುಖಾ-ಸುಮ್ಮನೆ ಕಾಯಿಸಿ ಡ್ಯೂಟಿ ನೀಡದೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಸಂಜೆವರೆಗೂ ಹಾಜರಿ ನೀಡದೆ ಸತಾಯಿಸುತ್ತಿದ್ದಾರೆ. ಇದರಿಂದ ಬೇಸತ್ತು ಹೋಗಿದ್ದೇವೆ. ಇಂದೂ ಸಹ ನಮ್ಮನ್ನು ಗೇಟ್ ಹೊರಗೆ ಹಾಕಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಹಿರೇಮಠ ಅವರು ಸಿಬ್ಬಂದಿಗೆ ರಾಜಿ ಮಾಡಿಸಿ, ಪ್ರತಿಭಟನೆಯನ್ನು ನಿಯಂತ್ರಿಸಿದರು. ಬಳಿಕ ಇಂಥಹ ಘಟನೆಗಳು ಜರುಗದಂತೆ ನೋಡಿಕೊಳ್ಳಿ ಎಂದು ಡಿಪೋ ಮಾನ್ಯೇಜರ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.