ಗದಗ : ಕರ್ತವ್ಯಲೋಪ ಹಿನ್ನೆಲೆ ಡಂಬಳ ಗ್ರಾಮ ಪಂಚಾಯತ್ನ ಹಿಂದಿನ ಪ್ರಭಾರ ಪಿಡಿಒ ಎಸ್.ಕೆ. ಕವಡೇಲಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಸುಶೀಲಾ ಬಿ ಆದೇಶ ಹೊರಡಿಸಿದ್ದಾರೆ. ಅಮಾನತು ಆದ ಎಸ್.ಕೆ. ಕವಡೇಲಿ ಅವರು ಸದ್ಯ ಕೊರ್ಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರೇಡ್ 2 ಕಾರ್ಯದರ್ಶಿಯಾಗಿದ್ದರು. ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯಿತಿಯ ಪಿಡಿಒ ಆಗಿದ್ದಾಗ ಕರ್ತವ್ಯಲೋಪ ಎಸಗಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ಸಾಮಾಜಿಕ ಹೋರಾಟಗಾರ ಮಂಜಯ್ಯಸ್ವಾಮಿ ಅರವಟಗಿಮಠ ಎಂಬುವರು ಗದಗ ಜಿಪಂ ಸಿಇಒ ಮತ್ತು ಮುಂಡರಗಿ ತಾಪಂ ಇಒ ಅವರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ನಡೆಸಲಾಗಿತ್ತು. ಈ ವೇಳೆ, ಹಲವು ಪ್ರಕರಣಗಳಲ್ಲಿ ಅಕ್ರಮ ಎಸಗಿರುವುದು ಸಾಬೀತಾಗಿತ್ತು. ಈ ಹಿನ್ನೆಲೆ ಎಸ್.ಕೆ. ಕವಡೇಲಿ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಬುದ್ಧೀನ್ ಕವಡೇಲಿ ಅವರು ವರ್ಗಾವಣೆ ಮತ್ತು ಇವರ ಅಧಿಕಾರ ಅವಧಿಯಲ್ಲಿ ಅಕ್ರಮವಾಗಿ ಸರ್ಕಾರದ ಜಾಗಗಳನ್ನು ಖಾಸಗಿ ವ್ಯಕ್ತಿಗಳಿಗೆ ದಾಖಲು ಮಾಡಿದ್ದಾರೆ. ಬಗ್ಗೆ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಮಂಜಯ್ಯಸ್ವಾಮಿ ಅರವಟಗಿಮಠ ಎಂಬುವರು ಜಿಪಂ ಸಿಇಒ ಮತ್ತು ಮುಂಡರಗಿ ತಾಪಂ ಇಒ ಅವರಿಗೆ ದೂರು ಸಲ್ಲಿದ್ದರು.
ಈ ಬಗ್ಗೆ ತನಿಖಾಧಿಕಾರಿಗಳ ತಂಡ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿತ್ತು. ಆರೋಪ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದಾಗ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ. ಶಾಬುದ್ಧೀನ್ ಕವಡೇಲಿ ಸದ್ಯ ಕೊರ್ಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರೇಡ್ 2 ಕಾರ್ಯದರ್ಶಿಯಾಗಿದ್ದರು. ಇವರು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಇವರ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತುಗೊಳಿಸುವುದು ಸೂಕ್ತವೆಂದು ಅಮಾನತು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.