ಗದಗ:ನಾಲ್ಕು ವರ್ಷಗಳಿಂದ ಹಾಯಾಗಿ ಓಡಾಡಿಕೊಂಡು ದರ್ಪದಿಂದ ಮೆರೆಯುತ್ತಿದ್ದ ಅತ್ಯಾಚಾರಿಯೊಬ್ಬನಿಗೆ ಗದಗ ಅಪರ ಮತ್ತು ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುರಕೋಡ ಗ್ರಾಮದ ದಲಿತ ಮಹಿಳೆಯೊಬ್ಬಳ ಮೇಲೆ ಅದೇ ಗ್ರಾಮದ ಮೇಲ್ಜಾತಿಯ ವ್ಯಕ್ತಿ ಶಿವಪುತ್ರಪ್ಪ ಗೊಜನೂರು ಎಂಬಾತ ಅತ್ಯಾಚಾರ ಎಸಗಿದ್ದ.
ಫೆಬ್ರವರಿ 5, 2017ರಂದು ಹಸು ಮೇಯಿಸಲು ಹೋಗಿದ್ದ ಮಹಿಳೆಯನ್ನು ಕಂಡು ಅದೇ ಸ್ಥಳದಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಶಿವಪುತ್ರಪ್ಪ ದರ್ಪದಿಂದ ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸಿದ್ದ. ಇದಕ್ಕೆ ಮಹಿಳೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು. ಆದರೆ ಏಕಾಂಗಿ ಮಹಿಳೆಯನ್ನು ಬಿಡದ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದನು.