ಗದಗ:ಜಿಲ್ಲೆಯಲ್ಲಿ ನಿನ್ನೆ ವೃದ್ಧೆಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿದ್ದರಿಂದ ಜನ ಆತಂಕಕ್ಕೀಡಾಗಿದ್ದಾರೆ. ಏಪ್ರಿಲ್ 7ರಂದು ಗದಗ ನಗರದ ರಂಗನವಾಡಗಲ್ಲಿಯಲ್ಲಿನ 80 ವರ್ಷದ ವೃದ್ಧೆಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಇಡೀ ನಗರವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಿ ರಂಗನವಾಡಗಲ್ಲಿ ಹಾಗೂ ಎಸ್ ಎಂ ಕೃಷ್ಣಾ ನಗರವನ್ನು ಕಂಟೈನ್ಮೆಂಟ್ ಏರಿಯಾ ಅಂತಾ ಘೋಷಣೆ ಮಾಡಿ ಅಲ್ಲಿಯ ಜನರನ್ನು ಹೊರಗಡೆ ಸಹ ಬಿಟ್ಟಿಲ್ಲ.
ವೃದ್ಧೆಯ ಸಂಪರ್ಕದಲ್ಲಿ ಇರುವವರಿಗೆ ಸೋಂಕು ತಗುಲಿದರೆ ಮುಂದಿನ ಪರಿಸ್ಥಿತಿ ಏನು ಅಂತಾ ಜನರೆಲ್ಲಾ ಭಯಭೀತರಾಗಿದ್ದರು. ವೃದ್ಧೆಯ ಸಂಪರ್ಕದಲ್ಲಿ ಇದ್ದ 7 ಜನ ವೈದ್ಯರು ಸೇರಿದಂತೆ 42 ಜನರನ್ನ ಗದಗ ಜಿಮ್ಸ್‌ನ ಕ್ವಾರಂಟೈನ್ ವಾರ್ಡ್‌ನಲ್ಲಿ ಇಟ್ಟು ಎಲ್ಲರ ರಕ್ತ ಮತ್ತು ಗಂಟಲು ದ್ರವ್ಯದ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಇವರೆಲ್ಲರ ವರದಿಗಳು ನೆಗಟಿವ್ ಅಂತಾ ಬಂದಿವೆ. ಆದರೆ, ಮನೆಯಲ್ಲಿಯೇ ಇದ್ದ 80 ವರ್ಷದ ವೃದ್ಧೆಗೆ ಸೋಂಕು ತಗುಲಿರೋದು ಹೇಗೆ ಅನ್ನೋದೆ ಜಿಲ್ಲಾಡಳಿತಕ್ಕೆ ಯಕ್ಷಪ್ರಶ್ನೆಯಾಗಿದೆ. ಯಾಕೆಂದರೆ, ವೃದ್ಧೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಈಕೆಯ ತಂಗಿಗಾಗಲಿ, ತಂಗಿಯ ಇಬ್ಬರು ಮಕ್ಕಳಿಗಾಗಲಿ ಸೋಂಕು ತಗುಲಿಲ್ಲ.