ಗದಗ:ಮನೆಗಳಿಗ ಹಕ್ಕುಪತ್ರ ಇಲ್ಲದ ಕಾರಣ ಯಾರೂ ಕನ್ಯೆ ಕೊಡುತ್ತಿಲ್ಲ ಎಂದು ಸಂಕಷ್ಟ ತೋಡಿಕೊಂಡಿದ್ದ ರೋಣ ತಾಲೂಕಿನ ಗಾಡಗೋಳಿ ಗ್ರಾಮದ ಯುವಕರಿಗೆ ಜಿಲ್ಲಾಡಳಿತ ಪರಿಹಾರ ಒದಗಿಸಿದೆ.
ಮಲಪ್ರಭಾ ನದಿಯ ಸಂತ್ರಸ್ತರಿಗೆ 10 ವರ್ಷದಿಂದ ಮನೆ ಹಂಚಿಕೆ ಮಾಡಿರಲಿಲ್ಲ. ಹೀಗಾಗಿ ಸ್ವಂತ ನೆಲೆ ಇಲ್ಲದೆ ಅವರು ಜೀವನ ದೂಡುತ್ತಿದ್ದರು. ಈ ಬಗ್ಗೆ ಈಟಿವಿ ಭಾರತ ಪ್ರಕಟಿಸಿದ್ದು, ಎಚ್ಚೆತ್ತುಕೊಂಡ ಜಿಲ್ಲಾಡಳಿತ ಗ್ರಾಮದಲ್ಲಿ ಕಾರ್ಯಕ್ರಮ ನಡೆಸಿ ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನು ವಿತರಿಸಿತು.
'ನಮ್ಮೂರಿಗೆ ಯಾರೂ ಕನ್ಯೆ ಕೊಡ್ತಿಲ್ಲ' ಅಂತಿದ್ದವ್ರಿಗೆ ಕೊನೆಗೂ ಸಿಕ್ತು ಮನೆ ಹಕ್ಕುಪತ್ರ: ಈಟಿವಿ ಭಾರತ ಫಲಶ್ರುತಿ ಗ್ರಾಮದ ಜನರಿಗೆ ವಾಸಯೋಗ್ಯವಾದ ಒಂದೇ ಒಂದು ಮನೆ ಇರಲಿಲ್ಲ. ಇದರಿಂದ ಈ ಗ್ರಾಮದ ಜನರಿಗೆ ಅನ್ಯ ಗ್ರಾಮದವರು ಕನ್ಯೆ ಕೊಡ್ತಿರಲಿಲ್ಲ, ಕನ್ಯೆ ತೆಗೆದುಕೊಳ್ತಿರಲ್ವಂತೆ. ಇದು ಗ್ರಾಮದ ಜನರಿಗೆ ದೊಡ್ಡ ತಲೆನೋವಾಗಿತ್ತು. ನಮ್ಮ ಮಕ್ಕಳಿಗೆ ಹೇಗಪ್ಪಾ ಮದುವೆ ಮಾಡೋದು? ಅಂತ ಪೋಷಕರು ಚಿಂತೆಗೀಡಾಗಿದ್ದರು.
ಕೆಲವರು ತಮ್ಮ ಮಕ್ಕಳ ಮದುವೆ ಮಾಡಿಸಲು ಅಂತಾನೇ ಊರುಬಿಟ್ಟು ಬೇರೆ ಊರಲ್ಲಿ ಹೋಗಿ ನೆಲೆಸಿದ್ದರು. ಇದನ್ನು ಗಮನಿಸಿದ ಈಟಿವಿ ಭಾರತ ವಿಶೇಷ ವರದಿ ಮೂಲಕ ಅಧಿಕಾರಿಗಳು, ಜನಪ್ರತಿನಿಧಿಗಳ ಕಣ್ತೆರೆಸಿತ್ತು. ಇದೀಗ ಜಿಲ್ಲಾಡಳಿತ ಗ್ರಾಮದ ಎಲ್ಲಾ ಜನರಿಗೆ ಮನೆ ಹಂಚಿಕೆ ಮಾಡಿ ಹಕ್ಕುಪತ್ರ ವಿತರಣೆ ಮಾಡುತ್ತಿದೆ. ಗದಗ ಎಸಿ ರಾಯಪ್ಪ ಅವರು ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಮನೆಗಳನ್ನು ಹಂಚಿಕೆ ಮಾಡಿದರು. ಇದರಿಂದ ಗ್ರಾಮಸ್ಥರು ಸಂತಸಗೊಂಡಿದ್ದಾರೆ.
ಇದನ್ನೂ ಓದಿ:ನಮಗೆ ಯಾರೂ ಹೆಣ್ಣು ಕೊಡ್ತಿಲ್ಲ, ನೀವಾದರೂ ಮದುವೆ ಮಾಡಿಸಿ: ಮಾಜಿ ಸಚಿವ ಸಿ.ಸಿ ಪಾಟೀಲರಿಗೆ ಯುವಕರ ಮನವಿ