ಬೆಂಗಳೂರು:ಬೆಂಬಲ ಬೆಲೆಯಲ್ಲಿ ರಾಗಿಯನ್ನು ಖರೀದಿಸಲು ವಿಧಿಸಿರುವ ನಿರ್ಬಂಧಗಳನ್ನು ತೆಗೆದು ಹಾಕಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಗಿ, ಭತ್ತ ಮುಂತಾದ ಉತ್ಪನ್ನಗಳಿಗೆ ನಿಗದಿ ಮಾಡಿರುವ ಬೆಲೆಯನ್ನು ಹೆಚ್ಚಿಸಬೇಕೆಂದು ಅವರು ಪತ್ರದ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇಡೀ ವರ್ಷ ಪದೇ ಪದೇ ಸುರಿದ ಮಳೆಯ ನಡುವೆಯೂ ರಾಗಿ, ಭತ್ತ ಮುಂತಾದ ಬೆಳೆಗಳನ್ನು ಕೊಯಿಲು ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ.
ಸರ್ಕಾರವು ಈ ವರ್ಷ ಜನವರಿ 1 ರಿಂದ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಗಳ ಪ್ರಮುಖ ಬೆಳೆಯಾದ ರಾಗಿ ಬೆಳೆಯುತ್ತಾರೆ ಎಂದಿದ್ದಾರೆ.
ಕೃಷಿ ಇಲಾಖೆ ಅಂದಾಜಿನ ಪ್ರಕಾರ ನಮ್ಮ ರೈತರು ಈ ವರ್ಷ ಸುಮಾರು 17.5 ಲಕ್ಷ ಎಕರೆ ಪ್ರದೇಶದಲ್ಲಿ ರಾಗಿ ಬೆಳೆದಿದ್ದಾರೆ. ಕೃಷಿ ಇಲಾಖೆಯ ದಾಖಲೆಗಳ ಪ್ರಕಾರ ಈ ಬಾರಿ ಕನಿಷ್ಠ ಎಂದರೂ 14-15 ಲಕ್ಷ ಟನ್ ಇಳುವರಿಯ ನಿರೀಕ್ಷೆ ಮಾಡಲಾಗಿದೆ. ಆದರೆ, ಅತಿವೃಷ್ಟಿಯ ಕಾರಣದಿಂದ ದೊಡ್ಡ ಮಟ್ಟದ ಬೆಳೆ ನಷ್ಟವಾಗಿತ್ತು. ಆದರೂ ರೈತರು ಬೆಂಬಲ ಬೆಲೆಯಡಿ ರಾಗಿಯನ್ನು ಮಾರಾಟ ಮಾಡಲು ಉತ್ಸಾಹ ತೋರಿಸುತ್ತಿದ್ದಾರೆ ಎಂದರು.
ಓದಿ:73ನೇ ಗಣತಂತ್ರ ದಿನದ ಸಂಭ್ರಮ... ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆ
ಮಾತೆತ್ತಿದರೆ ರೈತರ ಆದಾಯ ದ್ವಿಗುಣ ಗೊಳಿಸಲಾಗುವುದು ಎಂದು ಮಾತನಾಡುವ ಪ್ರಧಾನಿ ಮೋದಿಯವರ ಸರ್ಕಾರ ಈ ಬಾರಿ ರಾಜ್ಯದ ರೈತರಿಂದ ಕೇವಲ 2.10 ಲಕ್ಷ ಟನ್ ರಾಗಿಯನ್ನು ಮಾತ್ರ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ ಎಂದು ವಿವರಿಸಿದ್ದಾರೆ.
ಈ ಸೂಚನೆಯನ್ನು ಆಧರಿಸಿ ರಾಜ್ಯದ ಬಿಜೆಪಿ ಸರ್ಕಾರವು ರೈತರಿಂದ ರಾಗಿ ಖರೀದಿಸಲು ವಿಪರೀತ ನಿಬಂಧನೆಗಳನ್ನು ವಿಧಿಸಿದೆ. ಅದರಲ್ಲಿ ಒಬ್ಬ ರೈತರಿಂದ ಕೇವಲ 20 ಕ್ವಿಂಟಾಲ್ ರಾಗಿಯನ್ನು ಮಾತ್ರ ಖರೀದಿ ಮಾಡಲಾಗುವುದೆಂದು ತಿಳಿಸಿ ಆದೇಶ ಹೊರಡಿಸಿದೆ.
ಯೂಕಲಿಪ್ಟಸ್ ಬೆಳೆಯನ್ನು ಬೆಳೆಯುತ್ತಿದ್ದ ರೈತರು ಕಳೆದ ಎರಡು ವರ್ಷಗಳಿಂದ ಈಚೆಗೆ ತಮ್ಮ ಹೊಲಗಳಲ್ಲಿ ಬೆಳೆದಿದ್ದ ಯೂಕಲಿಪ್ಟಸ್ ಬೆಳೆಯನ್ನು ತೆಗೆದು ಹಾಕಿ ರಾಗಿ ಬೆಳೆಯಲಾರಂಭಿಸಿದ್ದಾರೆ. ಹಾಗಾಗಿ ಸಹಜವಾಗಿಯೆ ರಾಗಿಯ ಉತ್ಪಾದನೆ ಹೆಚ್ಚಾಗಿದೆ. ರಾಗಿಗೆ ನೀಡುತ್ತಿರುವ ಬೆಂಬಲ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಂದು ಕ್ವಿಂಟಾಲಿಗೆ ಕೇವಲ 82 ರೂಪಾಯಿಗಳಷ್ಟು ಮಾತ್ರ ಏರಿಕೆ ಮಾಡಲಾಗಿದೆ ಎಂದಿದ್ದಾರೆ.
ಕಳೆದ ವರ್ಷ ಒಂದು ಕ್ವಿಂಟಾಲಿಗೆ 3,295 ರೂ ನೀಡುತ್ತಿದ್ದರೆ ಈ ವರ್ಷ 3,377 ಗಳಿಗೆ ಏರಿಕೆ ಮಾಡಲಾಗಿದೆ. ಆದರೆ, ರೈತರು 2019-20 ರಲ್ಲಿ ಟ್ರ್ಯಾಕ್ಟರ್ನಲ್ಲಿ ಒಂದು ಗಂಟೆ ಹೊಲ ಊಳಲು 750 ರೂಪಾಯಿ ನೀಡುತ್ತಿದ್ದರೆ ಈ ವರ್ಷ 1250-1300 ರೂ ನೀಡಬೇಕಾಗಿದೆ.
ಬೆಳೆ ಕಟಾವು ಮಾಡುವ ಯಂತ್ರಕ್ಕೆ ಕೂಡ ಗಂಟೆಗೆ ಸುಮಾರು 750 ರೂಪಾಯಿಗಳಷ್ಟು ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲ ಅವಶ್ಯ ವಸ್ತುಗಳ ಬೆಲೆ ಏರಿಕೆಯಾಗಿವೆ. ರೈತರು ಬಳಸುವ ಪ್ಲಾಸ್ಟಿಕ್ ಮುಂತಾದ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಸಹ ಹೆಚ್ಚಿಸಲಾಗಿದೆ. ಇದೆಲ್ಲದರಿಂದಾಗಿ ರೈತರು ಬೆಳೆಗಳನ್ನು ಬೆಳೆಯಲು ಉತ್ಪಾದನಾ ವೆಚ್ಚ ಸಿಕ್ಕಾಪಟ್ಟೆ ಹೆಚ್ಚಾಗಿದೆ ಎಂದು ವಿವರಿಸಿದ್ದಾರೆ.
ಓದಿ:73ನೇ ಗಣರಾಜ್ಯೋತ್ಸವ... ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ