ಗದಗ:ತಾಲೂಕಿನ ಲಕ್ಕುಂಡಿ ಗ್ರಾಮ ಸೇರಿದಂತೆ ಸುತ್ತಲ ಗ್ರಾಮ ವ್ಯಾಪ್ತಿಯಲ್ಲಿ ಬೆಳೆದಿದ್ದ ನೂರಾರು ಎಕರೆ ಸೇವಂತಿಗೆ ತೇವಾಂಶದಿಂದ ಕೊಳೆತು ಹೋಗಿದೆ. ಅಳಿದುಳಿದ ಹೂವುಗಳಿಗೆ ಬೇಡಿಕೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ.
ಲಕ್ಕುಂಡಿ, ಅಡವಿ ಸೋಮಾಪುರ, ಕಣವಿ, ಹೊಸೂರು ಗ್ರಾಮ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಈ ಬಾರಿ ಸೇವಂತಿಗೆ ಬೆಳೆಯಲಾಗಿತ್ತು. ದೀಪಾವಳಿ ಹಬ್ಬಕ್ಕೆ ಹೂವು ಕೈ ಸೇರಿದ್ರೆ ಭರ್ಜರಿ ವ್ಯಾಪಾರ ಅಂತಾ ರೈತರು ಆಸೆ ಕಣ್ಣುಗಳಿಂದ ಕಾಯುತ್ತಿದ್ದರು. ಆದ್ರೆ ನಿರಂತರ ಮಳೆಯಿಂದಾಗಿ ಗಿಡಗಳು ಕೊಳೆತು ಹೋಗಿವೆ. ಕೆಲವೆಡೆ ಹೂವು ಬಂದಿದ್ರೂ, ತೇವಾಂಶ ಹೆಚ್ಚಿದ ಕಾರಣಕ್ಕೆ ಬೇಡಿಕೆ ಸಿಗದ ಸಾಧ್ಯತೆ ಇದೆ.
ಹೂವು ಬೆಳೆಗಾರರು ಮಾತನಾಡಿದರು ತೇವಾಂಶ ಹೆಚ್ಚಾಗಿ ಮುರುಟಿದ ಗಿಡ, ಹೂವು ಬೆಳೆ ಕುಂಠಿತ:'ಸುಗಂಧರಾಜ, ಕನಕಾಂಬರ, ಸೇವಂತಿಗೆ ಹೂವುಗಳಿಗೆ ಹಬ್ಬ ಹರಿದಿನಗಳಲ್ಲಿ ಭರ್ಜರಿ ಬೇಡಿಕೆ ಇರುತ್ತದೆ. 1 ಕೆಜಿ ಸೇವಂತಿಗೆ 200 ರಿಂದ 250 ರೂಪಾಯಿಗೆ ಮಾರಾಟ ಆಗ್ತಿತ್ತು. ಆದ್ರೆ ಈ ಬಾರಿ ಮಳೆಯಿಂದಾಗಿ ಹೂವು ತೇವಗೊಂಡಿರುವುದರಿಂದ ದರ ಕುಸಿಯುವ ಸಾಧ್ಯತೆ ಇದೆ. ಕೆಜಿಗೆ 30/40 ರೂಪಾಯಿಗೆ ಕೇಳಿದ್ರೂ ಅಚ್ಚರಿ ಇಲ್ಲ' ಅಂತಾರೆ ಲಕ್ಕುಂಡಿಯ ಹೂ ಬೆಳೆಗಾರ ಮರಿಯಪ್ಪ.
ಗದಗ ಜಿಲ್ಲೆಯ ಲಕ್ಕುಂಡಿ ಹೂವಿನ ಬೆಳೆಗೆ ಹೆಸರುವಾಸಿ. ಇಲ್ಲಿಯ ಹೂವುಗಳು ಬೆಳಗಾವಿ, ಬಾಗಲಕೋಟೆ, ಧಾರವಾಡದ ಮಾರುಕಟ್ಟೆಗೆ ಹೋಗುತ್ತವೆ. ಈ ಸಲ ಹೂವುಗಳ ಅಭಾವ ಕಾಡುತ್ತಿದ್ದು, ಬೇಡಿಕೆಗೆ ತಕ್ಕಂತೆ ಹೂವು ಪೂರೈಕೆ ಆಗೋದು ಸಾಧ್ಯವಿಲ್ಲ. ಇದೇ ಕಾರಣಕ್ಕೆ ವ್ಯಾಪಾರಸ್ಥರು ರೇಟ್ ಜಂಪ್ ಮಾಡೋ ಸಾಧ್ಯತೆ ಇರುತ್ತೆ. ಈ ಬಾರಿಯ ಹಬ್ಬದಲ್ಲಿ ಹೂವುಗಳು ಗಗನ ಕುಸುಮ ಆಗೋದ್ರಲ್ಲಿ ಡೌಟೇ ಇಲ್ಲ ಅಂತಿದಾರೆ ರೈತರು.
'ಗದಗ ತಾಲೂಕು ವ್ಯಾಪ್ತಿಯ 416 ಹೆಕ್ಟೇರ್ ಪ್ರದೇಶದಲ್ಲಿ ಸೇವಂತಿಗೆ, ಚೆಂಡು ಹೂವು, ಮಲ್ಲಿಗೆ, ಗುಲಾಬಿ ಬೆಳೆಯಲಾಗಿದೆ. ಆದ್ರೆ ನಿರಂತರ ಮಳೆಯಿಂದಾಗಿ ಬಹುತೇಕ ಬೆಳೆ ನೆಲ ಕಚ್ಚಿದೆ. ಹೀಗಿದ್ರೂ ಜನಪ್ರತಿನಿಧಿಗಳು ನಮ್ಮ ಅಹವಾಲು ಕೇಳಿಲ್ಲ' ಅನ್ನೋದು ಲಕ್ಕುಂಡಿ ರೈತ ಬಸನಗೌಡ ಬಿರಾದಾರ್ ಅವರ ಬೇಸರ.
ಎಕರೆಗೆ 1 ಲಕ್ಷ ರೂಪಾಯಿ ಖರ್ಚು ಮಾಡಿ ಹೂವು ಬೆಳೆಯಲಾಗಿದೆ. 4/5 ತಿಂಗಳು ಮಗುವಿನಂತೆ ಬೆಳೆಸಿದ್ದ ಗಿಡಗಳು ಜವಳು ಹಿಡಿದಿವೆ. ಮಳೆರಾಯ ಹೂ ಬೆಳೆಗಾರರನ್ನು ಸಂಕಷ್ಟಕ್ಕೆ ತಳ್ಳಿದ್ದಾನೆ. ಈಗ್ಲಾದ್ರೂ ಜನಪ್ರತಿನಿಧಿಗಳು ಇತ್ತಗಮನ ಹರಿಸಿ ಹೂ ಬೆಳೆಗಾರರ ಸಂಕಷ್ಟ ಆಲಿಸಬೇಕು ಎಂಬುದು ಬೆಳೆಗಾರರ ಒತ್ತಾಯ.
ಇದನ್ನೂ ಓದಿ:ಹೈಬ್ರೀಡ್ ತಳಿಯ ಬಾಳೆಗೂ ಜವಾರಿ ಹಣ್ಣಿನ ಬೆಲೆ : ಸಂತಸದಲ್ಲಿ ಬೆಳೆಗಾರರು