ಕರ್ನಾಟಕ

karnataka

ETV Bharat / state

ಗದಗದಲ್ಲಿ ಕೊಚ್ಚಿ ಹೋದ ಹೆದ್ದಾರಿ, ಹೊಲ ಹೊಕ್ಕ ನೀರು, ನಡುಗಡ್ಡೆಯಾದ್ವು ಗ್ರಾಮಗಳು

ನವಿಲು ತೀರ್ಥ ಡ್ಯಾಂನಿಂದ ನೀರು ಬಿಟ್ಟ ಪರಿಣಾಮ ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೂದಿಹಾಳ ಹಾಗೂ ಲಖಮಾಪೂರ ಗ್ರಾಮ ನಡುಗಡ್ಡೆಯಾಗಿವೆ. ಊರಲ್ಲಿ ಸಿಲುಕಿಕೊಂಡ ಜನರನ್ನು ಹೊರತರಲು ಸ್ಥಳೀಯ ಯುವಕರು ಹರಸಾಹಸ ಪಡುತ್ತಿದ್ದಾರೆ.

flood-in-gadaga
flood-in-gadaga

By

Published : Aug 18, 2020, 5:45 PM IST

ಗದಗ: ನವಿಲು ತೀರ್ಥ ಡ್ಯಾಂನಿಂದ ಇಂದು ಕೂಡಾ 21 ಸಾವಿರ ಕ್ಯುಸೆಕ್ ನೀರು ಬಿಟ್ಟಿದ್ದು ಗದಗ ಜಿಲ್ಲೆಯ 2 ಗ್ರಾಮಗಳು ನಡುಗಡ್ಡೆಯಾಗಿವೆ. ನರಗುಂದ ತಾಲೂಕಿನ ಬೂದಿಹಾಳ ಹಾಗೂ ಲಖಮಾಪೂರ ಗ್ರಾಮದ ಜನರು ತೊಂದರೆಗೆ ಸಿಲುಕಿದ್ದಾರೆ. ಗ್ರಾಮದ ರಸ್ತೆ ಸಂಪರ್ಕ ಬಂದ್ ಆಗಿದ್ದು, ಜನರು ನೀರಿನ ಮಧ್ಯೆ ಸಿಲುಕಿಕೊಂಡಿದ್ದಾರೆ.

ಸಂಕಷ್ಟದಲ್ಲಿರುವ ಜನರನ್ನು ಹೊರತರಲು ಸ್ಥಳೀಯ ಯುವಕರು ಹರಸಾಹಸಪಡುತ್ತಿದ್ದಾರೆ. ಗ್ರಾಮದ ಹಲವಾರು ಕುಟುಂಬಗಳು ಈಗ ನವಗ್ರಾಮಕ್ಕೆ ಸ್ಥಳಾಂತರಗೊಂಡಿವೆ. ಕೊಣ್ಣೂರು ಸೇತುವೆ ಕೊಚ್ಚಿ ಹೋಗಿದ್ದು, ಹುಬ್ಬಳ್ಳಿ-ವಿಜಯಪುರ ಸಂಪರ್ಕ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 218ರ ಪರಿಸ್ಥಿತಿ ಸಂಪೂರ್ಣ ಹದಗೆಟ್ಟು ಹೋಗಿದೆ.

ಗದಗದಲ್ಲಿ ಪ್ರವಾಹ, ಸಂಕಷ್ಟದಲ್ಲಿದೆ ಜನಜೀವನ

ಮೌನೇಶ್ವರ ಗುಡಿಯ ಹಿಂದಿನ ಜಾಡರ ಓಣಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ನೀರು ಮನೆಯೊಳಗೆ ಹೋಗಿ ಮನೆಯಲ್ಲಿನ ವಸ್ತುಗಳು ನೀರು ಪಾಲಾಗಿವೆ.

ಮನೆ ಬಿಟ್ಟು ಬರದ ಅಜ್ಜಿ:

ನದಿ ಪಕ್ಕದಲ್ಲಿಯೇ ಇರುವ ಕೊಣ್ಣೂರ ಗ್ರಾಮದ ಜಾಢರ ಓಣಿಯ ಶಿವನವ್ವ ವಾಲಿ ಎಂಬ 85 ವರ್ಷದ ಅಜ್ಜಿಯೊಬ್ಬರು ಪರದಾಡಿದ ಘಟನೆ ಕಂಡುಬಂತು. ಅಜ್ಜಿಯ ಮನೆಗೆ ನೀರು ಹೊಕ್ಕಿದ್ದು, ನಿನ್ನೆಯಿಂದ ಮನೆಯಲ್ಲಿ ಒಂಟಿಯಾಗಿಯೇ ಇವರು ಕಾಲ ಕಳೆದಿದ್ದಾರೆ.

ಪರಿಸ್ಥಿತಿ ಹೀಗಿದ್ದರೂ ಅಜ್ಜಿ ಮನೆ ಬಿಟ್ಟು ಹೋಗೋದಕ್ಕೆ ಒಪ್ಪಲಿಲ್ಲ. ಮನೆಯಲ್ಲಿನ ವಸ್ತುಗಳನ್ನು ಕಳ್ಳರು ಹೊತ್ತೊಯ್ಯಬಹುದು ಎಂದು ಅವರು ಮನೆಬಿಟ್ಟು ಬರಲು ಹಿಂದೇಟು ಹಾಕಿದ್ದಾರೆ. ಗ್ರಾಮಸ್ಥರು ಎಷ್ಟೇ ಮನವೊಲಿಸಿದರೂ ಬರದೇ ಹಠ ಹಿಡಿದಿದ್ದರು. ಬಳಿಕ ಜಿ.ಪಂ.ಅಧ್ಯಕ್ಷ ರಾಜೂಗೌಡ ಕೆಂಚನಗೌಡ ಭೇಟಿ ನೀಡಿ ಅಜ್ಜಿಗೆ ಪರಿಸ್ಥಿತಿಯ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು.

ಕಳೆದ ಬಾರಿಯ ಮಳೆಗೂ ಇಲ್ಲಿನ ರಸ್ತೆಗೆ ಹಾನಿಯಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಟಾಚಾರಕ್ಕೆ ರಸ್ತೆ ರಿಪೇರಿ ಮಾಡಿದೆ ಅಂತಾರೆ ಜನರು. ಈಗ ರಸ್ತೆ ಕಿತ್ತು ಹೋಗಿ ನೀರು ಪಾಲಾಗಿದೆ. ಹುಬ್ಬಳ್ಳಿಯಿಂದ ಸೊಲ್ಲಾಪುರ ಸಂಪರ್ಕಿಸುವ ಈ ಹೆದ್ದಾರಿ ಬಂದ್ ಆಗಿದೆ. ವಿಜಯಪುರದ ಸಂಪರ್ಕ ತಪ್ಪಿಹೋಗಿದೆ. ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗತ್ತು. ಮಾರ್ಗ ಬದಲಿಸಿ ರೋಣ, ಬಾಗಲಕೋಟೆ ಮೂಲಕ ವಾಹನಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಕಳೆದ ಸಲದ ಪ್ರವಾಹದಲ್ಲೇ ಕೊಣ್ಣೂರು ಸೇತುವೆ ಜಖಂ ಆಗಿತ್ತು. ಹೊಸ ಸೇತುವೆ ನಿರ್ಮಿಸಿದ್ದರೆ ಹಾನಿ ತಪ್ಪಿಸಬಹುದಿತ್ತು. ಆದರೆ ಸರ್ಕಾರದ ಸೋಮಾರಿತನದಿಂದ ಹಣ ಬಿಡುಗಡೆಯಾದರೂ ಸೇತುವೆ ಕಾಮಗಾರಿ ನಡೆಯಲೇ ಇಲ್ಲ ಎಂತಾರೆ ಇಲ್ಲಿನ ಜನರು.

ವಾಸನ ಗ್ರಾಮದ ಆರಾಧ್ಯ ದೇವರಾದ ತುಳಸಿಲಿಂಗೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಕಳೆದ ಸಲದಂತೆ ಈ ಸಲವೂ ಗ್ರಾಮದ ಜನರು ಅತಂತ್ರರಾಗಿದ್ದಾರೆ. ಕೊಣ್ಣೂರು ಸುತ್ತಲಿನ ಹಲವು ಗ್ರಾಮಗಳ ಹೊಲಗಳಲ್ಲಿ ನೀರು ನಿಂತಿದೆ. ಚಿಕ್ಕು, ಪೇರಳೆ, ಕಬ್ಬು, ಗೋವಿನ ಜೋಳ, ಜೋಳದ ಹೊಲಗಳಲ್ಲಿ ನೀರು ನಿಂತಿದ್ದು, ಬೆಳೆನಾಶವಾಗಿದೆ. ಕಳೆದ ಸಲದ ಬೆಳೆ ಪರಿಹಾರವೇ ಇನ್ನೂ ಕೈಸೇರದ ಕಾರಣ ಈ ಸಲದ ಪರಿಹಾರದ ಬಗ್ಗೆ ರೈತರಿಗೆ ಭರವಸೆಯೇ ಹೊರಟು ಹೋಗಿದೆ.

ABOUT THE AUTHOR

...view details