ಗದಗ : ಜಿಲ್ಲೆಯ ಕಡೆಯ ಹಳ್ಳಿಯೊಂದು ಅಭಿವೃದ್ಧಿ ಕಾಣದೇ ದಶಕಗಳೇ ಕಳೆದಿವೆ. ರೈತಾಪಿ ವರ್ಗವಿರುವ ಈ ಗ್ರಾಮದಲ್ಲಿ ಅಭಿವೃದ್ಧಿಯಾಗದ ರಸ್ತೆ ಹಾಗೂ ನಿರ್ಮಾಣವಾಗದ ಸೇತುವೆಯ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಯನ್ನು ಮನೆಗೂ ತರದ ಸ್ಥಿತಿಯಲ್ಲಿರುವ ಈ ಗ್ರಾಮಕ್ಕೆ ಇಷ್ಟುದಿಗಳ ಕಾಲ ಕಾಯಕಲ್ಪ ನೀಡದಿರುವುದು ರೈತಾಪಿ ವರ್ಗವನ್ನು ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.
ಒಂದು ಸೇತುವೆ ನಿರ್ಮಾಣವಾದರೆ ಸಾಕು ಎಂಬ ಅರೆ ಕಾಸಿನ ಆಸೆಗಾಗಿ 50 ವರ್ಷಗಳಿಂದ ಹೋರಾಟ ಮಾಡುತ್ತಲೇ ಬರುತ್ತಿರುವ ಜಿಲ್ಲೆಯ ತಿಮ್ಮಾಪುರ ಗ್ರಾಮದ ಜನರಿಗೆ ಈವರೆಗೂ ಅದು ಈಡೇರಿಲ್ಲ. ಬೇರೆ ದಾರಿ ಕಾಣದೇ ತಾವು ಬೆಳೆದ ಬೆಳೆಯನ್ನು ಹೊಲದಲ್ಲೇ ಬಿಟ್ಟು ಬರುವ ಸ್ಥಿತಿಗೆ ಬಂದು ನಿಂತಿರುವ ಗ್ರಾಮದ ಜನ, ರಾಜಕೀಯ ನಾಯಕರ ನಿರ್ಲಕ್ಷ್ಯತನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಒಂದು ದಿನದ ಸಮಸ್ಯೆಯಲ್ಲ, ಸುಮಾರು 50 ವರ್ಷಗಳಿಂದ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿಕೊಂಡು ಬರುತ್ತಿದ್ದಾರೆ.
ಒಂದು ಸೇತುವೆ ನಿರ್ಮಾಣಕ್ಕೆ ಸುಮಾರು 50 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಮತಗಿ ಗ್ರಾಮದಿಂದ ಕೋಟಮಚಗಿ ಮತ್ತು ರೋಣಕ್ಕೆ ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಎರಡು ದೊಡ್ಡ ಕಂದಕಗಳಿದ್ದು ಅವುಗಳಲ್ಲಿಯೇ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡಬೇಕಾದ ಅನಿವಾರ್ಯತೆ ಇದೆ. ಬಹುತೇಕ ರೈತರಿವ ಈ ಗ್ರಾಮದಲ್ಲಿ ತಮ್ಮ ಹೊಲ-ಗದ್ದೆಗಳಿಗೆ ಹೋಗಲು, ಬೆಳೆದ ಕಾಳುಗಳನ್ನು ಮನೆಗೆ ತರಲು ಪರದಾಡುತ್ತಿದ್ದಾರೆ.
ಸದ್ಯ ಮಳೆಗಾಲ ಇದ್ದುದರಿಂದ ಬೆಳೆದ ಬೆಳೆಗಳನ್ನು ಜಮೀನಿನಲ್ಲಿಯೇ ಬಿಟ್ಟಿದ್ದಾರೆ. ಗೋವಿನ ಜೋಳ, ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಬೆಳೆ ಹೀಗೆ... ನಾನಾ ಬೆಳೆಗಳನ್ನ ಅಲ್ಲಿಯೇ ಕೊಳೆಯುತ್ತಿವೆ. ಲಕ್ಷಾಂತರ ರೂ. ಆದಾಯ ಬರಬೇಕಿದ್ದ ರೈತನಿಗೆ ಒಂದು ಸೇತುವೆ ನಿರ್ಮಾಣವಾಗದಿರುವುದರಿಂದ ಹಾಗೂ ರಸ್ತೆ ಸಂಪೂರ್ಣ ಕೆಟ್ಟುಹೋಗಿರುವುದರಿಂದ ಈ ಎಲ್ಲ ನಷ್ಟ ಅನುಭವಿಸುತ್ತಿದ್ದೇವೆ.