ಗದಗ:ಅದು ರೈತರಿಗೆ ಅನುಕೂಲಕ್ಕಾಗಿ ಇರುವ ಸಹಕಾರಿ ಸಂಘ. ರೈತರ ಕೃಷಿ ಬದುಕು ಉನ್ನತೀಕರಣಗೊಳಿಸಲು ಅಧಿಕಾರಿಗಳು ಶ್ರಮಿಸಬೇಕಿತ್ತು. ಆದರೆ, ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮೂರು ದಶಕಗಳಿಂದ ಭ್ರಷ್ಟಾಚಾರ ನಡೆಸುತ್ತಲೇ ಬಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಅನ್ನದಾತನಿಗೆ ತನ್ನ ಹೆಸರಲ್ಲಿ ಮೋಸ ಆಗ್ತಿದೆ ಎಂದು ಗೊತ್ತಾಗಿದ್ದೇ ತಡ ನಗರದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಕಚೇರಿಯೊಳಗೆ ಅಧಿಕಾರಿಗಳನ್ನು ಸುತ್ತುವರೆದಿರುವ ರೈತರ ದಂಡು, ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರೈತರು. ಕಚೇರಿ ಎದುರೆ ಒಲೆ ಹಚ್ಚಿ ಅಡುಗೆ ಮಾಡಿ ಹೋರಾಟಕ್ಕಿಳಿದ್ದಾನೆ ಅನ್ನದಾತ. ಇದು ಗದಗ ನಗರದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಎದುರು ಕಂಡು ಬಂದ ದೃಶ್ಯ. ಇವರೆಲ್ಲರೂ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಮತ್ತು ಸುತ್ತಮುತ್ತಲಿನ ರೈತರು. ಕಚೇರಿಗೆ ಜಮಾಯಿಸಿ ಅವರಿಗೆ ಆಗಿರುವ ಅನ್ಯಾಯದ ವಿರುದ್ಧ ಕಿಡಿಕಾರಿದ್ದಾರೆ. ಮಾಡಲಗೇರಿ ಗ್ರಾಮದಲ್ಲಿ ಇರುವ ಕೃಷಿ ಪತ್ತಿನ ಸಹಕಾರಿ ಸಂಘದಿಂದ ರೈತರ ಹೆಸರಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ರೈತರು ಆರೋಪ ಮಾಡಿದ್ದಾರೆ.
ಇವರೆಲ್ಲರ ಹೆಸರಲ್ಲಿ ನಕಿಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಇವರಿಗೆ ಗೊತ್ತಿರದಂತೆ ಇವರ ಹೆಸರಲ್ಲಿಯೇ ಹಣದ ಅವ್ಯವಹಾರ ನಡೆದಿದೆ. ಚೆಕ್ಗಳಿಗೆ ನಕಲಿ ಸಹಿ ಮಾಡಿ ಹಣ ತೆಗೆದುಕೊಂಡಿದ್ದಾರೆ. ಕಾರ್ಯದರ್ಶಿಗಳು, ಅಧ್ಯಕ್ಷರು ಮತ್ತು ಸಿಬ್ಬಂದಿ ಯಾವುದೇ ರೀತಿಯ ದಾಖಲೆಗಳನ್ನು ಇಟ್ಟಿಲ್ಲ, ಶೇರ್ ಸರ್ಟಿಫಿಕೇಟ್ಗಳನ್ನು ಕೊಟ್ಟಿಲ್ಲ. ಶೇರ್ ಹೊಂದಿರುವ ರೈತರಿಗೆ ಮಾಹಿತಿ ನೀಡಿಲ್ಲ, ಡಿವಿಡೆಂಟ್ ಕೊಟ್ಟಿಲ್ಲ. 20 ವರ್ಷಗಳಿಂದ ಅಡಿಟ್ನಲ್ಲಿ ಮೃತರಾದವರ ಖಾತೆಗಳೂ ಸಹ ಇನ್ನೂ ಚಾಲ್ತಿಯಲ್ಲಿವೆ. ಇನ್ಸ್ಯೂರೆನ್ಸ್, ಕ್ರೆಡಿಟ್, ಡೆಬಿಟ್ಮೆಂಟನ್ ಇಲ್ಲ. ಒಬ್ಬೊಬ್ಬ ರೈತನ ಹೆಸರಲ್ಲಿ ಎರಡೆರಡು ಖಾತೆಗಳನ್ನ ತೆರೆದು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ರೈತರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.