ಗದಗ: ನಿರಂತರ ಮಳೆಯಿಂದಾಗಿ ರೈತ ಸಮುದಾಯ ಕಂಗಾಲಾಗಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದಿದ್ದ ಫಸಲು ರಣಮಳೆಗೆ ಕೊಚ್ಚಿ ಹೋಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತಾ ಕೊರಗುತ್ತಿರುವ ಹೊತ್ತಲ್ಲಿಯೇ ವಿಮೆ ಕಂಪನಿಗಳು ರೈತರ ಬದುಕಿನ ಜತೆಗೆ ಚೆಲ್ಲಾಟವಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಹೌದು, ಬೆಳೆ ನಾಶದಿಂದ ಕಂಗಾಲಾದ ಅನ್ನದಾತ ಬೆಳೆ ವಿಮಾ ಹಣದಿಂದಾದರೂ ಜೀವನ ಸಾಗಿಸಬಹುದು ಎಂಬ ನಿರೀಕ್ಷೆಯಿಟ್ಟುಕೊಂಡಿದ್ದ. ಆದರೆ ಇನ್ಸೂರೆನ್ಸ್ ಕಂಪನಿಗಳು ರೈತರ ಲೆಕ್ಕಾಚಾರ ಉಲ್ಟಾ ಮಾಡಿವೆ. ಅವಧಿ ಮುಗಿದಿದೆ ಎಂದು ರೈತರ ಬೆಳೆ ವಿಮೆ ಅರ್ಜಿ ತಿರಸ್ಕರಿಸಿ ರೈತರ ಬದುಕಿನ ಮೇಲೆ ಬರೆ ಎಳೆದಿವೆ.
ಡಿ.6 ಕ್ಕೆ ಕೇವಲ 72 ಗಂಟೆಗಳ ಕಾಲ ಮಾತ್ರ ಬೆಳೆ ವಿಮೆ ಅರ್ಜಿ ಹಾಕಲು ಅವಕಾಶ ಇದೆ ಎಂದು ಸಿಬ್ಬಂದಿ ಹೇಳಿ, ರೈತರ ಅರ್ಜಿ ಸ್ವೀಕರಿಸುತ್ತಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಪ್ರತಿಭಟನೆ ನಡೆಸಿದ್ದಾರೆ. ನಗರದ ಮುಳಗುಂದ ನಾಕಾ ಬಳಿಯ ಇರುವ ಬಜಾಜ್ ಅಲಿಯಾನ್ಸ್ ಕಂಪನಿ ಬಳಿ ಪ್ರತಿಭಟನೆ ನಡೆಸಿದ ರೈತರು, ಗದಗ ಲಕ್ಷ್ಮೇಶ್ವರ ರಸ್ತೆ ತಡೆ ನಡೆಸಿ ಕೃಷಿ, ತೋಟಗಾರಿಕೆ ಹಾಗು ವಿಮೆ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರೈತರನ್ನು ಸಮಾಧಾನ ಮಾಡಿದ್ದಾರೆ.
ರೈತರು ರೊಚ್ಚಿಗೇಳುತ್ತಿದ್ದಂತೆ ವಿಮಾ ಕಂಪನಿ ಸಿಬ್ಬಂದಿ ಕಚೇರಿ ಬಾಗಿಲು ಹಾಕಿಕೊಂಡು ಕಾಲ್ಕಿತ್ತಿದ್ದಾರೆ. ರೈತರ ಕಷ್ಟಕ್ಕೆ ಸ್ಪಂದಿಸಬೇಕಾದ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇತ್ತ ಸುಳಿಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ದಾವಣಗೆರೆ: ನರ್ಸಿಂಗ್, ಮೆಡಿಕಲ್ ಕಾಲೇಜುಗಳ ಮೇಲೆ ಆರೋಗ್ಯ ಇಲಾಖೆ ನಿಗಾ