ಗದಗ:ಯೂರಿಯಾ ಗೊಬ್ಬರಕ್ಕಾಗಿ ಜಿಲ್ಲೆಯ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ನಿನ್ನೆ ಪಟ್ಟಣದಲ್ಲಿ ಯೂರಿಯಾ ಖರೀದಿಸಲು ನೂಕುನುಗ್ಗಲು ಏರ್ಪಟ್ಟಿದ್ದು, ಹಲವು ರೈತರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಇಲ್ಲಿನ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಕಚೇರಿ ಬಳಿ ಗೊಬ್ಬರ ಖರೀದಿಗಾಗಿ ನೂರಾರು ರೈತರು ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಜನಸಂದಣಿ ಉಂಟಾಗಿ ಓರ್ವ ರೈತನ ಕಾಲಿಗೆ ಗಾಯವಾಗಿ ರಕ್ತ ಹರಿದಿದ್ದು, ನಂತರ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಇದಾದ ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಗೊಬ್ಬರಕ್ಕಾಗಿ ರೈತರ ಪರದಾಟ...ನೂಕುನುಗ್ಗಲಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ ಅನ್ನದಾತ ಕೇಂದ್ರದಲ್ಲಿ ಸಾಕಷ್ಟು ಗೊಬ್ಬರದ ದಾಸ್ತಾನು ಇದ್ದರೂ ದಲ್ಲಾಳಿಗಳು ಕೃತಕ ಅಭಾವ ಸೃಷ್ಟಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಶಿರಹಟ್ಟಿ ತಾಲೂಕಿನಲ್ಲೂ ಇದೇ ಸಮಸ್ಯೆ ಸೃಷ್ಟಿಯಾಗಿದೆ. ಕೃಷಿ ಅಧಿಕಾರಿಗಳು ದಲ್ಲಾಳಿಗಳಿಗೆ ಗೊಬ್ಬರ ಮಾರಾಟ ಮಾಡ್ತಿದ್ದಾರೆ. ಹೀಗಾಗಿ ಈ ಸಮಸ್ಯೆ ಉದ್ಭವಿಸಿದೆ ಎಂದು ರೈತರು ಆರೋಪಿಸಿದ್ದಾರೆ.
ಈ ಕುರಿತಂತೆ ಜಿಲ್ಲೆಯ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದು, ನ್ಯಾಯಯುತವಾಗಿ ರೈತರಿಗೆ ಗೊಬ್ಬರ ದೊರೆಯುವ ಹಾಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.