ಗದಗ:ಮಲಪ್ರಭ ಹಾಗೂ ಬೆಣ್ಣೆಹಳ್ಳದ ಪ್ರವಾಹವೀಗ ಹಲವಾರು ಗ್ರಾಮಗಳಿಗೆ ಬಂದಿದ್ದು, ಗ್ರಾಮಸ್ಥರನ್ನು ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದೆ. ಮನೆಯಿಲ್ಲದೇ ರಸ್ತೆಯಲ್ಲಿ, ಟ್ರ್ಯಾಕ್ಟರ್ ನಲ್ಲಿ ಜೀವನ ಸಾಗಿಸುವ ದುಸ್ಥಿತಿ ಉಂಟಾಗಿದೆ.
ಬೆಣ್ಣೆಹಳ್ಳ ಪ್ರವಾಹಕ್ಕೆ ಕೊಚ್ಚಿ ಹೋದ ಮನೆ... ಈಗ ಟ್ರ್ಯಾಕ್ಟರ್ನಲ್ಲೇ ನಡಿಯುತ್ತಿದೆ ಸಂಸಾರ
ರಾಜ್ಯದಲ್ಲಿ ಪ್ರವಾಹ ಎಂಬ ಭೂತಕ್ಕೆ ಸಿಕ್ಕಿ ಎಷ್ಟೋ ಸಂಸಾರಗಳು ಬೀದಿಗೆ ಬಂದಿವೆ. ವಾಸಿಸಲು ಮನೆ, ತಿನ್ನಲು ಆಹಾರವಿಲ್ಲದೇ ಪರದಾಡುವಂತಾಗಿದೆ. ಹೊಳೆ ಮಣ್ಣೂರಿನ ಕುಟುಂಬಗಳು ಮನೆಯಿಲ್ಲದೆ ಬೀದಿ ಬದಿಯಲ್ಲಿ ವಾಸಿಸುವಂತಾಗಿದೆ.
ಟ್ರ್ಯಾಕ್ಟರ್ ನಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬ
ರೋಣ ತಾಲೂಕಿನ ಹೊಳೆ ಮಣ್ಣೂರು, ಹೊಳೆ ಆಲೂರು, ಗಾಡಗೋಳಿ, ಬಸರಕೋಡ, ಮೆಣಸಗಿ, ಹೊಳೆ ಹಡಗಲಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿನ ಜನರೀಗ ಮನೆ ಕಳೆದುಕೊಂಡು ರಸ್ತೆ ಬದಿಯಲ್ಲಿ ವಾಸ ಮಾಡುತ್ತಿದ್ದಾರೆ. ಹೊಳೆ ಮಣ್ಣೂರಿನ ತೋಟನಗೌಡ, ಜಯನಗೌಡ, ಸುರೇಶ್, ಶಿವಪ್ಪ, ಚಿಕ್ಕಯ್ಯ ಕುಟುಂಬದ 20 ಜನರೀಗ ಬೀದಿ ಬದಿಯಲ್ಲಿ ಟ್ರ್ಯಾಕ್ಟರ್ ನಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಮಳೆಯ ಪ್ರವಾಹದಿಂದ ಮನೆಯಲ್ಲೆಲ್ಲಾ ನೀರು ತುಂಬಿ ಕೆಸರುಗದ್ದೆಯಾಗಿದೆ. ನೆರೆ ಇಳಿದರೂ ಸಹ ಮನೆಗೆ ಹೋಗೋ ಪರಿಸ್ಥಿತಿಯಿಲ್ಲ. ಸಾಂಕ್ರಾಮಿಕ ರೋಗಗಳ ಭೀತಿ ಎದಿರಿಸುವಂತಾಗಿದೆ.