ಗದಗ :ಭ್ರಷ್ಟಾಚಾರ ಅಂದ್ರೆ ತನಗೆ ಕುಡಿಯುವ ಶುದ್ಧ ನೀರಿನ ಘಟಕ ನೆನಪಾಗುತ್ತದೆ. ಶ್ರೀ ಸಾಮಾನ್ಯರ ಕುಡಿಯುವ ನೀರಿನಲ್ಲಿಯೂ ಸಹ ಕೋಟ್ಯಂತರ ರೂ. ದುಡ್ಡು ಹೊಡೆದಿದ್ದಾರೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಅದನ್ನು ತನಿಖೆ ಮಾಡಿಸುತ್ತೇನೆ ಎಂದು ಪರೋಕ್ಷವಾಗಿ ಹೆಚ್.ಕೆ. ಪಾಟೀಲ್ ವಿರುದ್ಧ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಗದಗ ಅಂದ್ರೆ ನನಗೆ ಭಯ ಆಗುತ್ತದೆ. ಯಾಕೆಂದರೆ ಹಿಂದೆ ಇಲ್ಲಿ ಭಾರತೀಯ ಜನತಾ ಪಾರ್ಟಿ ಕಟ್ಟುವ ಸಂದರ್ಭದಲ್ಲಿ ಪ್ರಚಾರಕ್ಕಂತ ಹುಲಕೋಟಿಗೆ ಹೋಗುವುದರೊಳಗೆ ನಮಗೆ ಹಿಗ್ಗಾ ಮುಗ್ಗಾ ಹೊಡೆದಿದ್ದರು. ಹೀಗಾಗಿ ಗದಗ ಅಂದ್ರೆ ಭಯ ಎಂದರು.
ಶಿವಕುಮಾರ ಉದಾಸಿ ಪರ ಈಶ್ವರಪ್ಪ ಮತಯಾಚನೆ ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಮತಯಾಚನೆ ವೇಳೆ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಹೆಚ್.ಕೆ. ಪಾಟೀಲ್, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿ ಇರುತ್ತಾರೋ ಗೊತ್ತಿಲ್ಲ. ಅವರನ್ನು ಭೂತಗನ್ನಡಿ ಹಿಡಿದು ಹುಡುಕಬೇಕು ಎಂದು ಲೇವಡಿ ಮಾಡಿದರು.
ಈ ಬಾರಿ ಬಿಜೆಪಿ ಎರಡಂಕಿ ದಾಟಲ್ಲಾ ಅಂತಾರೆ. ಎರಡಂಕಿ ದಾಟದಿದ್ರೆ ರಾಜಕೀಯದಿಂದ ದೂರ ಉಳಿಯುವುದಾಗಿ ಈಶ್ವರಪ್ಪ ಹೇಳಿದರು. ಬಿಜೆಪಿ ಕೋಮವಾದಿ ಅಂತಾರೆ, ಆದ್ರೆ ಕಾಂಗ್ರೆಸ್ ಲಿಂಗಾಯತ-ವೀರಶೈವ ಧರ್ಮ ಒಡೆಯುವ ಕೆಲಸ ಮಾಡಿತ್ತು. ಆದ್ರೆ ನಾವು ಜಾತಿ ಮಾಡಲ್ಲಾ, ಎಲ್ಲಾ ವರ್ಗದವರನ್ನು ಬಿಜೆಪಿ ದೊಡ್ಡ ಸ್ಥಾನಕ್ಕೆ ಕೂರಿಸಿದೆ. ಚುನಾವಣೆಯಲ್ಲಿನ ಸೋಲು-ಗೆಲುವೇ ರಾಜಕಾರಣ. ಕುಮಾರಸ್ವಾಮಿ ಅವರೇ ನಿಮ್ಮ ಮಗನನ್ನು ಖಂಡಿತಾ ಸೋಲಿಸುತ್ತೇವೆ. ಇದು ತಂತ್ರಗಾರಿಕೆ ಅಲ್ಲ, ರಾಜಕೀಯ ಎಂದು ಈಶ್ವರಪ್ಪ ಟಾಂಗ್ ನೀಡಿದ್ದಾರೆ.