ಗದಗ:ಇನ್ನುಂದೆ ಮದ್ಯ ಸೇವನೆ ಮಾಡಬೇಕಾದ್ರೆ ಮದ್ಯಪ್ರಿಯರು ಎಚ್ಚರ ವಹಿಸಬೇಕಾಗುತ್ತೆ. ಹೌದು ಜಿಲ್ಲೆಯಲ್ಲಿ ನಕಲಿ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಬಕಾರಿ ಅಧಿಕಾರಿಗಳು ಡಾಬಾಗಳ ಮೇಲೆ ದಾಳಿ ನಡೆಸಿದ್ದಾರೆ.
ಮುಂಡರಗಿ ಪಟ್ಟಣದ ಹಳ್ಳಿಮನಿ ಡಾಬಾ ಹಾಗೂ ಕೊರ್ಲಹಳ್ಳಿ ಜೈ ಮಾತಾ ಡಾಬಾಗಳಲ್ಲಿ ಅನಧಿಕೃತವಾಗಿ ಅದರಲ್ಲೂ ನಕಲಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಇಂಪೀರಿಯಲ್ ಬ್ಲ್ಯೂ ಬ್ರ್ಯಾಂಡ್ ಹೆಸರಿನ ಮದ್ಯವನ್ನು ನಕಲು ಮಾಡಿ ಅಬಕಾರಿ ಇಲಾಖೆಯ ಸೀಲ್ ಹಾಕಿ ಡಾಬಾಗಳಿಗೆ ಬಂದ ಗ್ರಾಹಕರಿಗೆ ನೀಡಲಾಗುತ್ತಿತ್ತು. ಈ ಕುರಿತು ಮಾಹಿತಿ ಪಡೆದ ಜಿಲ್ಲಾ ಅಬಕಾರಿ ಅಧಿಕಾರಿಗಳು ಡಾಬಾಗಳ ಮೇಲೆ ದಾಳಿ ನಡೆಸಿ ಮದ್ಯದ ಬಾಟಲ್ಗಳನ್ನು ಪರಿಶೀಲನೆ ನಡೆಸಿದ್ದಾರೆ.
ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಮದ್ಯ ಮಾರಾಟ ಈ ವೇಳೆ ಡಾಬಾ ಮಾಲೀಕರಾದ ಮಾರುತಿ ಗಚೀಮನಿ, ವೀರೇಶ ನಾವಳ್ಳಿ ಹಾಗೂ ನಕಲಿ ಮದ್ಯ ತಂದು ಕೊಟ್ಟ ಬಳ್ಳಾರಿ ಮೂಲದ ಬಾಳೆಶ, ರಮೇಶ ನಾಯ್ಕ್ ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 38.16 ಲೀಟರ್ ನಕಲಿ ಮದ್ಯ ಹಾಗೂ 7.8 ಲೀಟರ್ ಬಿಯರ್ ಬಾಟಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಬಕಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ನಕಲಿ ಜಾಲವನ್ನು ಪತ್ತೆ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ಕಮರಿಪೇಟೆಯಿಂದ ನಕಲಿ ಮದ್ಯ ಸರಬರಾಜು ಆಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಬಂಧಿತ ಆರೋಪಿತರು ಸಹ ಹುಬ್ಬಳ್ಳಿಯಿಂದ ನಕಲಿ ಮದ್ಯ ತೆಗೆದುಕೊಂಡು ಬಂದು ಗದಗ ಜಿಲ್ಲೆಯಲ್ಲಿ ಮಾರಾಟ ಮಾಡಲಾಗುತ್ತಿರು ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಳ್ಳಾರಿ ಹಾಗೂ ಹುಬ್ಬಳ್ಳಿಯಿಂದ ನಕಲಿ ಮದ್ಯ ಬಂದಿರುವ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸದ್ಯ ನಾಲ್ಕು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.