ಗದಗ:ಕೋವಿಡ್-19 ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಶಾಸಕ ಡಿ ಆರ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಡಿ.ಆರ್. ಪಾಟೀಲ್ರೊಂದಿಗೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್ಚಾಟ್ ರಾಜ್ಯ ಸರಕಾರದ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರೋದು ದುರ್ದೈವದ ಸಂಗತಿ ಅಂತಾ ಡಿ.ಆರ್.ಪಾಟೀಲ್ ಹೇಳಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೇ ಗೇಣಿದಾರರು ಭೂ ಒಡೆಯರಾಗಬೇಕು ಅನ್ನೋ ಹೋರಾಟವಿತ್ತು. ಇಂದಿರಾ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ದೇವರಾಜ ಅರಸು ಸರಕಾರವು ಗೇಣಿದಾರರು ಭೂ ಮಾಲೀಕರಾಗಲು ಅವಕಾಶ ಕಲ್ಪಿಸಿತ್ತು. ಪ್ರಸ್ತುತ ರಾಜ್ಯ ಸರಕಾರ ಉಳುವವನ ಆಧಾರವಾಗಿರೋ ಭೂಮಿಯನ್ನು ಕಸಿದುಕೊಳ್ಳಲು ಹೊರಟಿರೋದು ಪ್ರಜೆಗಳ ವಿರುದ್ಧದ ನಡೆಯಾಗಿದೆ ಎಂದು ಹೇಳಿದ್ರು.
ಸರಕಾರ ಕೋವಿಡ್ ಪರಿಸ್ಥಿತಿ ದುರುಪಯೋಗ ಪಡಿಸಿಕೊಳ್ತಿದೆ. ಯಾರೋ ಹೋರಾಟ ಮಾಡದ ಸಂದರ್ಭದಲ್ಲಿ ಈ ಎಲ್ಲಾ ನಿಯಮಗಳನ್ನ ಜಾರಿಗೆ ತರಲಾಗ್ತಿದೆ. ಸದ್ಯದ ಸರಕಾರದ ನಾಯಕರು ಎಂದಿಂದಿಗೂ ಶ್ರೀಮಂತರ ಪರವಾಗಿದ್ದವರು. ರೈತರಲ್ಲದ ಭೂ ಮಾಫಿಯಾ ದೊರೆಗಳು ವಿಜೃಂಭಿಸಲು ಅನುಕೂಲವಾಗಿದೆ. ಇತ್ತ ಚುನಾಯಿತ ಎಪಿಎಂಸಿ ಅಧಿಕಾರ ಸಹ ಮೊಟುಕುಗೊಳಿಸಲಾಗಿದೆ. ರೈತರನ್ನು ಬಂಡವಾಳಶಾಹಿಗಳ ಕೈಗೊಂಬೆಯನ್ನಾಗಿ ಮಾಡಿದ್ದಾರೆ. ಪಂಚಾಯತ್ ಚುನಾವಣೆಗಳನ್ನು ಸಹ ಮುಂದೂಡಿ ಪ್ರಜಾಸತ್ತಾತ್ಮಕ ವ್ಯವಸ್ಥೆ ದುರ್ಬಲಗೊಳಿಸಿದ್ದಾರೆ ಎಂದು ಡಿ ಆರ್ ಪಾಟೀಲ್ ಕಿಡಿಕಾರಿದ್ದಾರೆ.
ಧ್ವನಿ ಇಲ್ಲದ ಅಸಂಘಟಿತರ ಧ್ವನಿ ಹತ್ತಿಕ್ಕುವುದು ಕೇಂದ್ರ ಹಾಗೂ ರಾಜ್ಯ ಸರಕಾರದ ಗುರಿಯಾಗಿದ್ದು, ಬಡವರ ಪರ, ರೈತರ ಪರದ ಸಂಘಟನೆಗಳು ಸರಕಾರದ ಈ ಕ್ರಮಗಳನ್ನ ಹಿಂದೆ ತೆಗೆದುಕೊಳ್ಳುವಂತೆ ಮಾಡಲು ಒತ್ತಾಯಿಸಬೇಕಾಗಿದೆ. ಹಸಿರು ಶಾಲು ಹಾಕಿಕೊಂಡು ಮೆರೆಯುವ ನಾಯಕರೆಲ್ಲ ಇದನ್ನು ಖಂಡಿಸಬೇಕಾಗಿದೆ. ಲಾಕ್ಡೌನ್ ಮುಗಿದ ನಂತರ ಇವುಗಳ ವಿರುದ್ಧ ಬಹುದೊಡ್ಡ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ರವಾನಿಸಿದರು.