ಗದಗ: ಮೃತಪಟ್ಟಿದ್ದ ಗರ್ಭಿಣಿಯ ಗರ್ಭದಿಂದ ಶಸ್ತ್ರಚಿಕಿತ್ಸೆಯ ಮೂಲಕ ಜೀವಂತವಾಗಿ ಮಗುವನ್ನು ಹೊರತೆಗೆದಿರುವ ಘಟನೆ ನಗರದ ಹೃದಯಭಾಗದಲ್ಲೇ ಇರುವ ಸರ್ಕಾರಿ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ನಡೆಯಿತು. ವೈದ್ಯರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ರೋಣ ತಾಲೂಕಿನ ಮುಶಿಗೇರಿಯ ಅನ್ನಪೂರ್ಣ ಅಬ್ಬಿಗೇರಿ ಎಂಬ ಗರ್ಭಿಣಿಗೆ ಇದೇ 4ರಂದು ಹೆರಿಗೆಯಲ್ಲಿ ಏರುಪೇರಾಗಿತ್ತು. ತುಂಬು ಗರ್ಭಿಣಿಯಾಗಿದ್ದರೂ ಆಕೆಗೆ ಹೆರಿಗೆ ನೋವು ಬಾರದೆ ಮೂರ್ಛೆ ರೋಗ ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದರಂತೆ. ಎಲ್ಲಾ ಆಸ್ಪತ್ರೆಗಳನ್ನೂ ಅಲೆದಾಡಿ ಬಳಿಕ ಗದಗ ನಗರದ ಡಿಎಂಎಂ ಹೆರಿಗೆ ಆಸ್ಪತ್ರೆಗೆ ಬರುವಷ್ಟರಲ್ಲಿ ಅನ್ನಪೂರ್ಣ ಮೃತಪಟ್ಟಿದ್ದಾರೆ.
ಡಿಎಂಎಂ ಹೆರಿಗೆ ಆಸ್ಪತ್ರೆಯ ವೈದ್ಯರು ಗರ್ಭಿಣಿಯ ಆರೋಗ್ಯವನ್ನು ಪರಿಶೀಲನೆ ಮಾಡಿದಾಗ ಉಸಿರಾಟ ನಿಂತುಹೋಗಿತ್ತು. ಆದ್ರೆ ಸ್ಕ್ಯಾನಿಂಗ್ ಮಾಡಿ ನೋಡಿದಾಗ ಮಗುವಿನ ಹೃದಯಬಡಿತ ಇನ್ನೂ ಬಡಿದುಕೊಳ್ಳುತ್ತಿತ್ತಂತೆ. ಹೀಗಾಗಿ ತಕ್ಷಣ ಎಚ್ಚೆತ್ತುಕೊಂಡ ವೈದ್ಯರು ಮಗುವನ್ನಾದರೂ ಬದುಕಿಸಬಹುದು ಅಂತ ಹತ್ತೇ ನಿಮಿಷದೊಳಗೆ ಕುಟುಂಬಸ್ಥರೊಂದಿಗೆ ಚರ್ಚಿಸಿ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಕೆಲವೇ ನಿಮಿಷದಲ್ಲಿ ವೈದ್ಯರು ಮೃತ ಗರ್ಭಿಣಿಯ ಗರ್ಭದಲ್ಲಿದ್ದ ಮಗುವನ್ನು ಜೀವಂತವಾಗಿ ಹೊರತೆಗೆದಿದ್ದಾರೆ.