ಗದಗ: ಕೊರೊನಾ ಮಹಾಮಾರಿ ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿದ್ದು, ವೈದ್ಯರು ಕೂಡ ಸೋಂಕಿಗೆ ಬಲಿಯಾಗಿದ್ದಾರೆ. ಆದರೂ ಕೂಡ ವೈದ್ಯರು ಕುಟುಂಬದ ಸದಸ್ಯರನ್ನು ನೋಡದೆ ಜೀವದ ಹಂಗು ತೊರೆದು ಜನರ ಸೇವೆ ಮಾಡುತ್ತಾ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
ಗದಗದಲ್ಲಿ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು ಕಣ್ಣಿಗೆ ಕಾಣದ ಒಂದು ವೈರಸ್ ಇಡೀ ವಿಶ್ವವನ್ನೇ ಬುಡಮೇಲು ಮಾಡುತ್ತಿದೆ. ಈ ವೈರಸ್ ವಿರುದ್ಧ ಯುದ್ಧ ಸಾರಿರುವ ವೈದ್ಯರು ನಿತ್ಯ ಹೋರಾಟ ನಡೆಸುತ್ತಿದ್ದಾರೆ. ಮನೆ, ಮಕ್ಕಳು, ಕುಟುಂಬ ತೊರೆದು ಸಾರ್ವಜನಿಕರ ಸೇವೆಗೆ ಹಗಲು ಇರುಳು ಶ್ರಮಿಸುತ್ತಿದ್ದಾರೆ. ಗದಗದ ಜಿಮ್ಸ್ ಆಸ್ಪತ್ರೆಯಲ್ಲಿಯೂ ಸಹ ಆಸ್ಪತ್ರೆಯ ನಿರ್ದೇಶಕ ಪಿ.ಎಸ್.ಭೂಸರಡ್ಡಿ ಅವರ ನೇತೃತ್ವದಲ್ಲಿ ಡಾ. ಜಗದೀಶ್ ಹಾಗೂ ಡಾ. ಜಯರಾಜ್ ಪಾಟೀಲ್ ಸೇರಿದಂತೆ ವೈದ್ಯರ ತಂಡ ಹಗಲು ಇರುಳು ಶ್ರಮಿಸುತ್ತಿದೆ.
ಗದಗ ನಗರದಲ್ಲಿ ನಾಲ್ಕು ಜನರಿಗೆ ಕೊರೊನಾ ವೈರಸ್ ತಗುಲಿದೆ. ಮೊದಲು ಸಾವನ್ನಪ್ಪಿದ್ದ 166ನೇ ಸಂಖ್ಯೆಯ ಸೋಂಕಿತ 80 ವರ್ಷದ ವೃದ್ಧೆಗೂ ಸಹ ಚಿಕಿತ್ಸೆ ನೀಡಿದ್ದರು. ಅಷ್ಟೇ ಅಲ್ಲದೆ ಐಸೋಲೇಷನ್ ವಾರ್ಡ್ಗೆ ಬರುವ ಪ್ರತಿಯೊಂದು ಶಂಕಿತ ರೋಗಿಗಳಿಗೂ ಸಹ ತಮ್ಮ ಜೀವವನ್ನೇ ಪಣಕ್ಕಿಟ್ಟು ಚಿಕಿತ್ಸೆ ನೀಡುತ್ತಾ ರಕ್ಷಣೆಗೆ ನಿಂತಿದ್ದಾರೆ.
ಇನ್ನು ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಫೋನ್ನಲ್ಲಿ ವಿಡಿಯೋ ಕಾಲ್ ಮಾಡಿ ಪತ್ನಿ, ಮಕ್ಕಳ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಕೊರೊನಾ ವಿರುದ್ಧದ ಯುದ್ಧಕ್ಕೆ ವೈದ್ಯರ ಕುಟುಂಬಸ್ಥರು ಸಹ ಸಾಥ್ ನೀಡಿದ್ದಾರೆ. ವೈದ್ಯ ಡಾ. ಜಯರಾಜ್ ಪಾಟೀಲ್ ಅವರು ಕಳೆದ ಮೂರು ತಿಂಗಳಿಂದ ಮನೆಗೆ ಹೋಗದೆ ಕೆಲಸ ನಿರ್ವಹಿಸುತ್ತಿದ್ದಾರೆ. ಡಾ. ಜಗದೀಶ್ ಅವರಿಗೆ ಕಳೆದ ಒಂದೂವರೆ ತಿಂಗಳ ಹಿಂದೆ ಮಗು ಜನಿಸಿದೆ. ಮಗುವಿನ ಮುಖ ಸಹ ನೋಡದೆ ಜನರ ಸೇವೆಯಲ್ಲಿ ನಿರತರಾಗಿದ್ದಾರೆ.