ಗದಗ : 84 ಎಕರೆ ವಿಸ್ತೀರ್ಣದ ಬಹುದೊಡ್ಡ ಕೆರೆ ತುಂಬಿಸಲು ಸರ್ಕಾರದಿಂದ ಒಂಭತ್ತು ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿತ್ತು. ಅಲ್ಲದೆ ನದಿಯ ನೀರು ಕೆರೆಗೆ ತರಲು ಅಗತ್ಯ ಕಾಮಗಾರಿಯೂ ನಡೆದಿತ್ತು. ವಿಪರ್ಯಾಸ ಅಂದ್ರೆ ನದಿಯಿಂದ ಬರಲಿರುವ ನೀರನ್ನುಆ ಕೆರೆ ತನ್ನೊಡಲಲ್ಲಿ ಇಟ್ಟುಕೊಳ್ಳುವ ಸ್ಥಿತಿಯಲ್ಲೇ ಇಲ್ಲ. ಹಾಗಾಗಿ ಕೆರೆಯ ಒಡಲಲ್ಲಿ ನೀರು ನಿಲ್ಲುವಂತೆ ಅಲ್ಲಿನ ಅನ್ನದಾತರೆಲ್ಲ ಸೇರಿ ಸರ್ಕಾರದ ಸಹಾಯ ಬಯಸದೇ ಸ್ವಾಮೀಜಿಯೊಬ್ಬರ ಸಹಕಾರದಿಂದ ವಿಶೇಷ ಪ್ರಯತ್ನ ನಡೆಸಿದ್ದಾರೆ.
ಹೌದು, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರ ಗ್ರಾಮದಲ್ಲಿ 1979ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಂಡ ಈ ಕೆರೆಯಿಂದ ಈ ಗ್ರಾಮದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಕುಡಿಯುವ ನೀರಿನ ದಾಹವನ್ನ ತೀರಿಸಿಕೊಳ್ತಿದೆ. ಅಲ್ಲದೇ ಇಲ್ಲಿನ ರೈತರ ಬೋರವೆಲ್ಗಳು ಸಹ ರಿಚಾರ್ಜ್ ಆಗ್ತಾಯಿದ್ವು. ಕಾಲಕ್ರಮೇಣ ಕೆರೆಯಲ್ಲಿ ಹೂಳು ತುಂಬುತ್ತಾ ಬಂದು ಇಲ್ಲಿನ ಅಂತರ್ಜಲ ಕೂಡಾ ಕುಸಿದಿದೆ. ಸರ್ಕಾರದ ಗಮನಕ್ಕೆ ಈ ಸಮಸ್ಯೆಯನ್ನು ತಂದ್ರು ಕೂಡಾ ಏನು ಪ್ರಯೋಜನವಾಗದೇ ಇಂದು ಅಲ್ಲಿನ ರೈತರು ಸೇರಿದಂತೆ ಸುತ್ತಮುತ್ತಲಿರುವ ಅಂಕಲಿ ಕೊಗನೂರ, ಕೊಕ್ಕರಗುಂದಿ, ಬೂದಿಹಾಳ, ಸೂರಣಗಿ, ಎಲ್ಲಾಪೂರ, ದೊಡ್ಡೂರ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ತಮ್ಮ ಸ್ವಂತ ಹಣದಿಂದಲೇ ಈ ಕೆರೆಯ ಅಭಿವೃದ್ಧಿಗೆ ಮುಂದಾಗಿದ್ದಾರೆ.