ಗದಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇವಲ ಪೇಪರ್ ಟೈಗರ್ ಮಾತ್ರ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಪಠ್ಯಕ್ರಮದಲ್ಲಿ ಟಿಪ್ಪು ಪಾಠ ಕೈ ಬಿಟ್ಟ ವಿಚಾರವಾಗಿ ಗದಗನಲ್ಲಿ ಮಾತನಾಡಿದ ಅವರು, ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು. ಡಿ.ಕೆ.ಶಿವಕುಮಾರ್ ಅವರು ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ನೂರು ಬಾರಿ ನಾವು ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಯಾವುದಾದರೂ ಒಂದಾದರು ದೊಡ್ಡ ಮಟ್ಟದ ಹೋರಾಟ ಮಾಡಿದ್ರಾ ಎಂದು ಪ್ರಶ್ನಿಸಿದರು. ಕೇವಲ ಪೇಪರ್ನಲ್ಲಿ ಹೇಳಿಕೆ ನೀಡಿ ಪೇಪರ್ ಟೈಗರ್ ಆಗಿದ್ದಾರೆ. ಒಂದು ಕಡೆ ಡಿ.ಕೆ.ಶಿವಕುಮಾರ್, ಮತ್ತೊಂದೆಡೆ ಸಿದ್ದರಾಮಯ್ಯ ಸೋನಿಯಾ ಗಾಂಧಿಯನ್ನು ತೃಪ್ತಿ ಪಡಿಸಲು ಹೇಳಿಕೆ ನೀಡುತ್ತಾರೆ.
ಟಿಪ್ಪು ಜೊತೆಗೆ ಸಂಗೊಳ್ಳಿ ರಾಯಣ್ಣನ ಪಾಠ ಕೈಬಿಟ್ಟಿರೋ ವಿಚಾರದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಇದು ನನ್ನ ಗಮನಕ್ಕೆ ಬಂದಿಲ್ಲ. ಟಿಪ್ಪು ಹಾಗೂ ಸಂಗೊಳ್ಳಿ ರಾಯಣ್ಣ ಕುರಿತು ಸಹ ಪ್ರಸ್ತಾಪ ಆಗಿತ್ತು. ಗೊಂದಲವನ್ನು ಕೂಡಲೇ ನಿವಾರಿಸುವುದಾಗಿ ಹೇಳಿದ್ದಾರೆ. ವಿವಾದವನ್ನು ಸೃಷ್ಟಿ ಮಾಡುವುದರಲ್ಲಿ ಕಾಂಗ್ರೆಸ್ಗೆ ಸಂತೃಪ್ತಿ ಇದೆ. ಇದನ್ನು ಬಿಟ್ಟರೆ ಬೇರೆ ಉದ್ಯೋಗ ಇಲ್ಲ ಅವರಿಗೆ ಎಂದು ಕಿಡಿಕಾರಿದರು.
ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ವಿಚಾರದ ಬಗ್ಗೆ ನನಗೆ ABCDಯೂ ಸಹ ಗೊತ್ತಿಲ್ಲ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೇನೆ. ಅಷ್ಟು ಬಿಟ್ಟರೆ ಈ ಬಗ್ಗೆ ನನಗೆ ABCD ಗೊತ್ತಿಲ್ಲ ಎಂದರು. ನಿಗಮ ಮಂಡಳಿ ಹಂಚಿಕೆ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಅಧಿಕಾರದ ರಾಜಕಾರಣ ಸ್ವಾಭಾವಿಕವಾದದ್ದು. ಎಂಎಲ್ಎ ಆಗಲು ಸ್ಥಾನ ಸಿಗಲಿಲ್ಲ ಎಂದರೆ ಅಸಮಾಧಾನ. ಎಂಎಲ್ಎ ಆದ ಮೇಲೆ ಮಂತ್ರಿಯಾಗಬೇಕು ಅನ್ನೋದು. ಅಧಿಕಾರದ ರಾಜಕಾರಣ ಯಾವಾಗಲೂ ಇರೋದೆ. ನಮ್ಮ ಪಕ್ಷಕ್ಕೆ ಶಕ್ತಿಯಿದೆ. ನಾವು ಅಸಮಾಧಾನ ನಿಭಾಯಿಸುತ್ತೇವೆ ಎಂದರು.