ಗದಗ: ಗುತ್ತಿಗೆ ಅವಧಿ ಮುಂದುವರಿಸಲು ಡಿ ಗ್ರೂಪ್ ನೌಕರರಿಗೆ ಹೆಚ್ಚಳವಾಗಿರುವ ಗೌರವಧನವನ್ನು ಲಂಚವಾಗಿ ಪಡೆಯುತ್ತಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಅಧೀಕ್ಷಕನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅಧೀಕ್ಷಕ ಶಿವಾನಂದ ಸಿಂದೋಗಿ ಬಂಧಿತ ಆರೋಪಿಯಾಗಿದ್ದಾನೆ.
ಗುತ್ತಿಗೆ ಅವಧಿ ವಿಸ್ತರಿಸಲು ಲಂಚಕ್ಕೆ ಬೇಡಿಕೆ; ಹಣ ಪಡೆಯುತ್ತಿದ್ದಾಗಲೇ ಎಬಿಸಿ ಬಲೆಗೆ ಬಿದ್ದ ಡಿಹೆಚ್‌ಒ ಅಧೀಕ್ಷಕ - ಲಂಚ ಪಡೆಯತ್ತಿದ್ದಾಗ ಆರೋಗ್ಯಾಧಿಕಾರಿ ಕಚೇರಿ ಅಧೀಕ್ಷಕ ಬಂಧನ
ಡಿ ಗ್ರೂಪ್ ನೌಕರರ ಗುತ್ತಿಗೆ ಅವಧಿಯನ್ನು ಮುಂದುವರಿಸಲು 19 ಸಾವಿರ ಲಂಚ ಪಡೆಯುತ್ತಿದ್ದಾಗ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಅಧೀಕ್ಷ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.
ಜಿಲ್ಲಾಡಳಿತ ಭವನದಲ್ಲಿರುವ ಡಿಎಚ್ಒ ಕಚೇರಿಯಲ್ಲಿ ಆರೋಪಿ ಶಿವಾನಂದ ಸಿಂದೋಗಿ 19 ಸಾವಿರ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಐದು ಜನ ಡಿ ಗ್ರೂಪ್ ನೌಕರರಿಗೆ ಈ ಹಿಂದೆ ನೀಡಿರುವ ಗೌರವಧನ ಹೆಚ್ಚಾಗಿದೆ. ಆ ಹೆಚ್ಚುವರಿ ಹಣ ಮರಳಿಸಬೇಕು ಹಾಗೂ ಒಪ್ಪಂದ ಮಾಡಿಕೊಂಡಿರುವ ಗುತ್ತಿಗೆ ಅವಧಿ ಮುಗಿಯಲು ಬಂದಿದ್ದು, ಅದೂ ಕೂಡ ಮುಂದುವರೆಯಬೇಕಾದರೆ ಹೆಚ್ಚಾದ ಹಣ ಕೊಡಲೇಬೇಕು ಎಂದು ಶಿವಾನಂದ ಹಣ ಕೇಳಿದ್ದರು ಎನ್ನಲಾಗಿದೆ.
ಐದು ಜನರಲ್ಲಿ ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಶಂಕ್ರಯ್ಯ ಸಾರಂಗಮಠ ಎಂಬುವವರು ಬುಧವಾರ ಸಂಜೆ 19 ಸಾವಿರ ಹಣ ಕೊಡುವಾಗ ಈ ದಾಳಿ ನಡೆದಿದೆ. ಎಸಿಬಿ ಎಸ್ಪಿ ಬಿ.ಎಸ್ ನೇಮಗೌಡ, ಡಿವೈಎಸ್ಪಿ ಎಂ.ವಿ ಮಲ್ಲಾಪೂರ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಗಳಾದ ಆರ್ ಎಫ್ ದೇಸಾಯಿ, ವೀರೇಶ್ ಹಳ್ಳಿ, ಸಿಬ್ಬಂದಿ ನಾರಾಯಣಗೌಡ್ ತಾಯಣ್ಣವರ್, ಎಂ.ಎಂ.ಅಯ್ಯನಗೌಡ್ರ, ಆರ್ ಎಸ್ ಹೆಬಸೂರ, ವೀರೇಶ್ ಜೋಳದ, ಶರೀಫ್ ಮುಲ್ಲಾ, ಮಂಜು ಮುಳಗುಂದ, ಐ ಸಿ ಜಾಲಿಹಾಳ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.