ಗದಗ :ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿ ಚುನಾವಣೆ ಘೋಷಿಸಿದ್ದು, ಚುನಾವಣೆ ನಡೆಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ. ಅಲ್ಲದೇ, ನ್ಯಾಯ ಸಮ್ಮತ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 122 ಗ್ರಾಮ ಪಂಚಾಯತಿಗಳಿದ್ದು, ಇವುಗಳ ಪೈಕಿ 117 ಗ್ರಾ.ಪಂಗಳ 602 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಇನ್ನುಳಿದ ಜಿಲ್ಲೆಯ ಐದು ಗ್ರಾಮ ಪಂಚಾಯತಿಗಳಾದ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ, ಗದಗ ತಾಲೂಕಿನ ಹರ್ಲಾಪುರ, ಗಜೇಂದ್ರಗಡ ತಾಲೂಕಿನ ಕುಂಟೋಜಿ ಮತ್ತು ಶಾಂತಗಿರಿ, ಮುಂಡರಗಿ ತಾಲೂಕಿನ ಮುರಡಿ ಗ್ರಾ.ಪಂಗಳ ಅವಧಿ ಇನ್ನೂ ಮುಗಿಯದಿರದ ಕಾರಣ ಈ ಹಂತದಲ್ಲಿ ಚುನಾವಣೆ ಜರಗುವುದಿಲ್ಲ ಎಂದರು.
ಸದ್ಯ ಚುನಾವಣೆ ನಡೆಯುವ 117 ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು 5,34,085 ಮತದಾರರಿದ್ದಾರೆ. ಅದರಲ್ಲಿ 2,70,245 ಜನ ಪುರುಷರು, 2,63,840 ಜನ ಮಹಿಳಾ ಮತದಾರರಿದ್ದಾರೆ. ಜಿಲ್ಲೆಯ 117 ಗ್ರಾಮ ಪಂಚಾಯತಿಗಳ ಪೈಕಿ 53 ಗ್ರಾಮ ಪಂಚಾಯತಿಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಗದಗ ತಾಲೂಕಿನ 26, ಲಕ್ಷೇಶ್ವರ 13, ಶಿರಹಟ್ಟಿ 14 ಸೇರಿ ಮೂರು ತಾಲೂಕುಗಳ ಒಟ್ಟು 53 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಜರುಗಲಿದೆ. ಅದರಂತೆ, ಎರಡನೇ ಹಂತದಲ್ಲಿ ಮುಂಡರಗಿ ತಾಲೂಕಿನ 18, ಗಜೇಂದ್ರಗಡ 9, ನರಗುಂದ 13 ಹಾಗೂ ರೋಣ 24 ಸೇರಿ ನಾಲ್ಕು ತಾಲೂಕುಗಳ ಒಟ್ಟು 64 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆಗೆ ಡಿ.7 ರಂದು ಅಧಿಕೃತ ಚುನಾವಣಾದೇಶ ಹೊರಡಿಸಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಡಿ.11 ಕೊನೆಯ ದಿನವಾಗಿದೆ.