ಕರ್ನಾಟಕ

karnataka

ETV Bharat / state

ಗದಗ ಜಿಲ್ಲೆಯಲ್ಲಿ ನಿಷೇಧಾಜ್ಞೆ; ಮಧ್ಯಾಹ್ನ 2ರವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ - Gadag

ಗದಗದಲ್ಲಿ ಜುಲೈ 17 ರ ರಾತ್ರಿ 8 ಗಂಟೆಯಿಂದ ಜುಲೈ 27 ರ ಬೆಳಗ್ಗೆ 5 ಗಂಟೆಯವರೆಗೆ ಕೆಲವೊಂದು ವಿನಾಯಿತಿ ನೀಡಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ನಿಷೇಧಾಜ್ಞೆಯ ಆದೇಶ ಹೊರಡಿಸಿದ್ದಾರೆ.

District Collector M. Sundaresha Babu
ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು

By

Published : Jul 16, 2020, 10:09 PM IST

ಗದಗ: ಜಿಲ್ಲೆಯಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜುಲೈ 17 ರ ರಾತ್ರಿ 8 ಗಂಟೆಯಿಂದ ಜುಲೈ 27 ರ ಬೆಳಿಗ್ಗೆ 5 ಗಂಟೆಯವರೆಗೆ ಕೆಲವೊಂದು ವಿನಾಯಿತಿ ನೀಡಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ನಿಷೇಧಾಜ್ಞೆಯ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳು ಮತ್ತು ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅನುಮತಿಸಲಾಗಿದೆ. 65 ವರ್ಷದ ಮೇಲ್ಪಟ್ಟ ಹಿರಿಯ ನಾಗರಿಕರು, 10 ವರ್ಷದೊಳಗಿನ ಮಕ್ಕಳು, ಯಾವುದೇ ರೋಗ ಹೊಂದಿರುವ ರೋಗಗ್ರಸ್ತ ವ್ಯಕ್ತಿಗಳು ಹಾಗೂ ಗರ್ಭಿಣಿಯರು ಕಡ್ಡಾಯವಾಗಿ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ.

ಯಾವುದೇ ಬೃಹತ್ ಸಾರ್ವಜನಿಕ ಸಭೆ, ಸಮಾರಂಭಗಳು ಹಾಗೂ ಸಂತೆ, ಜಾತ್ರೆ, ಧಾರ್ಮಿಕ, ಸಾಮಾಜಿಕ ಗುಂಪು ಸೇರುವುದನ್ನು ನಿರ್ಬಂಧಿಸಲಾಗಿರುತ್ತದೆ. ಈ ಆದೇಶದ ದಿನಾಂಕದ ಮೊದಲು ನಿಶ್ಚಯಿಸಿದ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆದುಕೊಂಡ ವಿವಾಹ ಕಾರ್ಯಕ್ರಮಗಳಿಗೆ ಈ ಮೊದಲು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ.

ಇನ್ನು ಶವ ಸಂಸ್ಕಾರ ಕಾರ್ಯಕ್ಕೆ ಈ ಮೊದಲು ನಿಗದಿಪಡಿಸಿದಂತೆ ಅನುಮತಿಸಲಾಗಿದೆ. ಎಲ್ಲಾ ಸಾರ್ವಜನಿಕ ಸ್ಥಳ, ಅಂಗಡಿಗಳಲ್ಲಿ ಒಂದು ಮೀಟರ್ ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಹಾಗೆಯೇ ಸ್ಯಾನಿಟೈಸರ್ ಮತ್ತು ಮಾಸ್ಕ್ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ತುರ್ತು ಸೇವೆಗೆ ಹೊರತುಪಡಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಆಗಮಿಸುವುದು ಕಂಡು ಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಆದೇಶದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details