ಗದಗ : ಗದಗ-ಬೆಟಗೇರಿ ನಗರಸಭೆಗೆ ನಾಳೆ ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಶಾಂತಿ, ಸುವ್ಯವಸ್ಥೆಗಾಗಿ ಪೊಲೀಸರನ್ನು ನಿಯೋಜಿಸಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಟ್ಟು136 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ನಗರದ ಮುಂಡರಗಿ ರಸ್ತೆಯಲ್ಲಿರುವ ಗುರುಬಸವ ಶಾಲೆಯಲ್ಲಿ ಮತಯಂತ್ರ ಹಾಗೂ ಚುನಾವಣೆ ಸಲಕರಣೆ ಹಂಚಿಕೆ ಕಾರ್ಯ ಭರದಿಂದ ಸಾಗಿದೆ. ಚುನಾವಣೆ ಸೇವೆಗೆ ಪೋಲಿಂಗ್ ಅಧಿಕಾರಿಗಳು ಸೇರಿ 600 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 136 ಮತಗಟ್ಟೆಗಳ ಪೈಕಿ 40 ಸೂಕ್ಷ್ಮ ಹಾಗೂ 96 ಅತಿಸೂಕ್ಷ್ಕ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿ ಸುವ್ಯವಸ್ಥೆಗಾಗಿ ಇಬ್ಬರು ಡಿಎಸ್ಪಿ, 8 ಜನ ಸಿಪಿಐ, 16 ಪಿಎಸ್ಐ ಸೇರಿದಂತೆ ಡಿಆರ್, ಕೆಎಸ್ಆರ್ಪಿ ತುಕುಡಿ ಸೇರಿದಂತೆ 200 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಗದಗ ಎಸ್ಪಿ ಶಿವಪ್ರಕಾಶ್ ಮಾಹಿತಿ ನೀಡಿದ್ದಾರೆ.