ಗದಗ :ಗದಗ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಅನುಮಾನ ವ್ಯಕ್ತವಾಗಿದೆ. ಬಿಜೆಪಿಯ ಕೆಲ ಪ್ರಮುಖರಲ್ಲಿ ಅಸಮಾಧಾನದ ಹೊಗೆಯಾಡ್ತಿದೆ ಅನ್ನೋ ಮಾತಿಗೆ ಇದೀಗ ಪುಷ್ಟಿ ಸಿಕ್ಕಿದೆ. ಹಿಂದಿನ ಗದಗ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟರ್ ಮತ್ತು ಜಿಲ್ಲೆಯ ಪ್ರಮುಖ ಶಾಸಕರ ನಡುವೆ ಈಗ ಜಟಾಪಟಿ ಶುರುವಾಗಿದೆ. ಮೋಹನ್ ಮಾಳಶೆಟ್ಟರ್ ಮತ್ತು ರೋಣ ಶಾಸಕ ಮತ್ತು ಮಾಜಿ ಸಚಿವ ಕಳಕಪ್ಪ ಬಂಡಿ ನಡುವೆ ಶೀತಲ ಸಮರ ಶುರುವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮೋಹನ್ ಮಾಳಶೆಟ್ಟರ್ ಮತ್ತು ಶಾಸಕ ಕಳಕಪ್ಪ ಬಂಡಿ ನಡುವೆ ಫೇಸ್ಬುಕ್ ನಲ್ಲಿ ಜಟಾಪಟಿ ಶುರುವಾಗಿದೆ.
ಬರೀ ಬೂದಿಯಾಗಲು ಮನುಷ್ಯ ಜೀವನ ಪೂರ್ತಿ ಬೇರೆಯವರನ್ನು ನೋಡಿ ಉರಿಯುತ್ತಾನೆಂದು ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟರ್ ಪೇಸ್ಬುಕ್ ಪೋಸ್ಟ್ ಹಾಕಿದ್ದರು. ಆ ಮೂಲಕ ತಮ್ಮನ್ನು ಉದ್ದೇಶ ಪೂರ್ವಕವಾಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದರು ಎಂಬ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಶಾಸಕ ಕಳಕಪ್ಪ ಬಂಡಿ ಇದು ನಿನಗೆ ಅನ್ವಯಿಸುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಇದೀಗ ಇವರಿಬ್ಬರ ಶೀತಲ ಸಮರ ಗದಗ ಜಿಲ್ಲೆಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಮೂಲಕ ಮೋಹನ್ ಮಾಳಶೆಟ್ಟರ್ಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡೋ ಇಚ್ಛೆ ಇರಲಿಲ್ಲ. ಆದ್ರೆ ಪಕ್ಷದ ಕೆಲ ಪ್ರಮುಖರು ಹಿರಿಯ ಸಚಿವರು ಮತ್ತು ಶಾಸಕರು ತಮ್ಮ ಆನಾರೋಗ್ಯವನ್ನು ಮುಂದೆ ಇಟ್ಟು ರಾಜೀನಾಮೆ ನೀಡುವಂತೆ ಒತ್ತಡ ಹಾಕಿದ್ರು. ಹೀಗಾಗಿ ಮೋಹನ್ ಮಾಳಶೆಟ್ಟರ್ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಬೇಕಾಯ್ತು ಅಂತ ಕಾರ್ಯಕರ್ತರು ಮತ್ತು ವಿರೋಧ ಪಕ್ಷದವರು ಮಾತನಾಡಿಕೊಳ್ಳುತ್ತಿದ್ದು, ಈ ನಡುವೆ ಇವರ ನಡುವಿನ ಫೇಸ್ ಬುಕ್ ಜಟಾಪಟಿ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಸದ್ಯ ಶಾಸಕ ಕಳಕಪ್ಪ ಬಂಡಿ ಅವರ ಆಪ್ತ ಮುತ್ತಣ್ಣ ಲಿಂಗನಗೌಡ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಚಿವರಿಂದಲೇ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ್ಗೆ ಇರಿಸು ಮುರಿಸು: ನಿನ್ನೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ್ ಗೆ ಮುಜುಗರ ತರುವಂತ ಘಟನೆ ನಡೆಯಿತು. ಅದರಲ್ಲೂ ಸಚಿವ ಸಿ ಸಿ ಪಾಟೀಲ್ರಿಂದಲೇ ಈ ಮುಜಗುರದ ಪ್ರಸಂಗ ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರ 8 ವರ್ಷಗಳ ಸಾಧನೆ ಬಗ್ಗೆ ಮಾಧ್ಯಮಗೋಷ್ಟಿ ಕರೆಯಲಾಗಿತ್ತು. ಈ ವೇಳೆ ವಿ.ಪ ಸದಸ್ಯ ಎಸ್.ವಿ ಸಂಕನೂರ್ ಮತ್ತು ಸಚಿವ ಸಿ ಸಿ ಪಾಟೀಲ್ ಪಕ್ಕದಲ್ಲಿಯೇ ಕುಳಿತಿದ್ದರು. ಸಂಕನೂರ ಪಕ್ಕದಲ್ಲಿ ಜಿಲ್ಲಾಧ್ಯಕ್ಷ ಮುತ್ತಣ್ಣ ಕುಳಿತಿದ್ದರು. ಆಗ ಸಚಿವ ಸಿ ಸಿ ಪಾಟೀಲ್ ಸಂಕನೂರ್ಗೆ ನನ್ನ ಪಕ್ಕದಲ್ಲಿ ಜಿಲ್ಲಾಧ್ಯಕ್ಷರನ್ನು ಕಳಿಸು. ನೀವು ಆ ಕಡೆ ಹೋಗಿ ಕುಳಿತುಕೊಳ್ಳಿ ಎಂದು ಸೂಚನೆ ನೀಡಿದರು. ಇದರಿಂದ ತೀವ್ರ ಮುಜಗುರಕ್ಕೊಳಗಾದ ಸಂಕನೂರ್ ಅವರು ಅನಿವಾರ್ಯವಾಗಿ ಲಿಂಗನಗೌಡರನ್ನು ಸಚಿವರ ಪಕ್ಕದಲ್ಲಿ ಕೂರಿಸಿ ತಾವು ಪಕ್ಕಕ್ಕೆ ಸರಿದು ಕುಳಿತರು. ಈ ಎಲ್ಲಾ ಘಟನೆಗಳನ್ನು ನೋಡಿದರೆ ಜಿಲ್ಲೆಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಒಳಗೊಳಗೆ ಪಕ್ಷದ ಪ್ರಮುಖರಲ್ಲಿ ಬೇಗುದಿ ಶುರುವಾಗಿದೆ ಅನ್ನೋದು ಎದ್ದು ಕಾಣುತ್ತಿದೆ.
ಓದಿ :ಮುಂಗಾರು ಚುರುಕು.. ಹಲವೆಡೆ ಆಲಿಕಲ್ಲು ಸಹಿತ ಮಳೆ