ಗದಗ :ಬಾಳೆಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳು, ಶಿರಹಟ್ಟಿಯ ಶ್ರೀ ಜಗದ್ಗುರು ಫಕ್ಕೀರೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕವಾದರು. ಅಪಾರ ಭಕ್ತರು ಹಾಗೂ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಸಂಪ್ರದಾಯ ಬದ್ಧವಾಗಿ ಉತ್ತರಾಧಿಕಾರಿ ನೇಮಕ ಮಾಡಲಾಯಿತು.
ಪಟ್ಟಾಧ್ಯಕ್ಷರಾದ ಶ್ರೀ ಫಕ್ಕೀರೇಶ್ವರ ಸಿದ್ದರಾಮ ಮಹಾಸ್ವಾಮಿಗಳು ಕರ್ತೃ ಗದ್ದುಗೆ ಪ್ರೇರಣೆಯಂತೆ ಅವರನ್ನು ನೇಮಕ ಮಾಡಲಾಗಿದೆ. ಕಳೆದ ಎರಡು ತಿಂಗಳಿಂದ ಉತ್ತರಾಧಿಕಾರಿಯಾಗಿ ದಿಂಗಾಲೇಶ್ವರ ಶ್ರೀಗಳನ್ನು ಮಾಡುವಂತೆ ಕರ್ತೃ ಗದ್ದುಗೆ ಪ್ರೇರಣೆ ಆಗುತ್ತಿತ್ತು.
ಹಾಗಾಗಿ, ಬಾಲೆಹೊಸರು ಗ್ರಾಮದ ಭಕ್ತರು ಹಾಗೂ ಶಿರಹಟ್ಟಿ ಫಕ್ಕೀರೇಶ್ವರ ಮಠದ ಭಕ್ತರ ಸಮ್ಮುಖದಲ್ಲಿ ಇಂದು ಉತ್ತರಾಧಿಕಾರಿಯಾಗಿ ನೇಮಕ ಮಾಡಿ ಘೋಷಣೆ ಮಾಡಿದ್ದಾರೆ.
ಉತ್ತರಾಧಿಕಾರಿಯಾಗಿ ನೇಮಕವಾದ ಬಳಿಕ ಬಾಲೆಹೊಸರು ದಿಂಗಾಲೇಶ್ವರ ಸ್ವಾಮೀಜಿಗಳು, ಶ್ರೀ ಮಠದ ಪರಂಪರೆಯಂತೆ ಇನ್ನು ಮುಂದೆ ಶ್ರೀ ಫಕ್ಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಎಂದು ನಾಮಕರಣ ಮಾಡಲಾಯಿತು. ಈಗಿರುವ ಪಟ್ಟಾಧ್ಯರಾದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಹಿರಿಯ ಶ್ರೀಗಳಾಗಿ, ಉತ್ತರಾಧಿಕಾರಿಯಾಗಿ ನೇಮಕವಾದ ಶ್ರೀ ಫಕ್ಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಕಿರಿಯ ಶ್ರೀಗಳಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.