ಗದಗ: ಪಂಚಾಚಾರ್ಯರ ವಿಚಾರಗಳನ್ನು ಹೊಂದಿರುವ ದಿಂಗಾಲೇಶ್ವರ ಶ್ರೀಗಳು ಬಸವ ತತ್ವದ ಮೇಲೆ ಹುಟ್ಟಿಕೊಂಡಿರುವ ಹುಬ್ಬಳ್ಳಿಯ ಮೂರುಸಾವಿರ ಮಠದ ಪೀಠ ಕಿತ್ತುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರ ಮಠ ವಿರಕ್ತ ಪರಂಪರೆಯ ಮಠ. ಸರ್ವವನ್ನು ತ್ಯಜಿಸಿ ಸಮಾಜಕ್ಕಾಗಿ ಅರ್ಪಿಸಿಕೊಂಡ ವಿರಕ್ತರಿಗೆ ಆ ಪೀಠ ತಾನಾಗಿಯೇ ದಕ್ಕಬೇಕು. ಸಧ್ಯ ದಿಂಗಾಲೇಶ್ವರ ಶ್ರೀಗಳು ಪೀಠಕ್ಕಾಗಿ ಹವಣಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ ಎಂದರು.
ಮಠದ ಆಸ್ತಿ ಮೇಲೆ ಕಣ್ಣಿಟ್ಟಿರುವ ದಿಂಗಾಲೇಶ್ವರ ಶ್ರೀಗಳು ಪೀಠಕ್ಕೆ ಬರುವುದು ಬೇಡ ದಿಂಗಾಲೇಶ್ವರ ಶ್ರೀಗಳು ಮುಂಗಡ ಅವರಿಗೆ ಹಣ ಕೊಟ್ಟಿರುವುದಾಗಿ ಹೇಳುತ್ತಿದ್ದಾರೆ. ಎಷ್ಟು ಹಣ ಕೊಟ್ಟಿದ್ದಾರೆ? ಯಾವ ಕಾರಣಕ್ಕಾಗಿ ಕೊಟ್ಟಿದ್ದಾರೆ? ಅಷ್ಟಕ್ಕೂ ಹಣ ಕೊಟ್ಟಿರುವ ಕಾರಣಕ್ಕೆ ಆ ಮಠಕ್ಕೆ ಪೀಠಾಧಿಪತಿಯಾಗುತ್ತೇನೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಮೂರು ಸಾವಿರ ಮಠಕ್ಕೆ ದೊಡ್ಡ ಮಟ್ಟದ ಆಸ್ತಿ ಇರುವಾಗ ದಿಂಗಾಲೇಶ್ವರ ಶ್ರೀಗಳು ಹಣ ಕೊಟ್ಟಿದ್ದೇನೆ ಎನ್ನುವ ಮಾತಿನಲ್ಲಿಯೇ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ ಎಂದರು.
ಪೀಠಕ್ಕಾಗಿ ರಾಜಕಾರಣಿಗಳ ಬಾಗಿಲು ಬಡಿಯುವಂತಹ ಮತ್ತು ಮಠದ ಆಸ್ತಿ ಮೇಲೆ ಕಣ್ಣಿಟ್ಟಿರುವ ದಿಂಗಾಲೇಶ್ವರ ಶ್ರೀಗಳು ಪೀಠಕ್ಕೆ ಬರುವುದು ಬೇಡ. ಒಂದು ವೇಳೆ ದಿಂಗಾಲೇಶ್ವರ ಶ್ರೀಗಳು ಉತ್ತರಾಧಿಕಾರಿ ಆದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.