ಗದಗ : ಇಲ್ಲಿನ ಜಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ಡಯಾಲಿಸಿಸ್ ಕೇಂದ್ರವನ್ನು ಬಂದ್ ಮಾಡಲಾಗಿದೆ. ಡಯಾಲಿಸಿಸ್ ಗೆ ಬಂದ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಗದಗ ತಾಲೂಕಿನ ಕಳಸಾಪುರ ಗ್ರಾಮದ ಬದ್ಲವ್ವಾ ಲಮಾಣಿ ಎನ್ನುವ ಮಹಿಳೆ ಕಳೆದ ಒಂದು ವಾರದಿಂದ ಡಯಾಲಿಸಿಸ್ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಇಂದು ಬಾ, ನಾಳೆ ಬಾ ಅಂತ ಆಕೆಯನ್ನು ಅಲೆದಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಾರ್ಚ್ 31ರಂದು ಡಯಾಲಿಸಿಸ್ ಗೆಂದು ಮಹಿಳೆಯು ಜಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದರು. ಆದರೆ 24 ಗಂಟೆ ಕಳೆದರೂ ಇವರಿಗೆ ಡಯಾಲಿಸಿಸ್ ಮಾಡಿಲಾಗಿಲ್ಲ. ಡಯಾಲಿಸಿಸ್ ವಿಭಾಗದ ಮುಂದೆ ಮಹಿಳೆ ನರಳುತ್ತಾ ಇದ್ರೂ ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕೇಳಿದಾಗ ಯಂತ್ರ ದುರಸ್ತಿಯಾಗಿಲ್ಲ ಎಂದು ಚಿಕಿತ್ಸೆ ನೀಡದೇ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ ಎನ್ನಲಾಗ್ತಿದೆ. ಬಡವರಾಗಿರೋ ನಾವು ಖಾಸಗಿ ಆಸ್ಪತ್ರೆಯ ದುಬಾರಿ ಹಣವನ್ನು ಪಾವತಿಸಲು ಸಾಧ್ಯವಿಲ್ಲ. ಇಲ್ಲಿ ನೋಡಿದ್ರೆ ಯಾರೂ ನಮ್ಮ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಡಯಾಲಿಸಿಸ್ ಸಿಗದಿದ್ದರಿಂದ ಉಸಿರಾಟದ ತೊಂದರೆ ಉಲ್ಬಣವಾಗುತ್ತಿದೆ. ನಾನು ಸತ್ತೇ ಹೋಗ್ತಿನಿ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ.
ಜಿಮ್ಸ್ ಆಸ್ಪತ್ರೆ ಡಯಾಲಿಸಿಸ್ ಯಂತ್ರಗಳಲ್ಲಿ ವಿದ್ಯುತ್ ಹರಿದು ರೋಗಿಗಳಿಗೆ ತೊಂದರೆಯಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಮಾರ್ಚ್ 23ರಂದು ಹಾಗೂ 25ರಂದು ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡೋ ವೇಳೆ ಡಯಾಲಿಸಿಸ್ ಯಂತ್ರದಲ್ಲಿ ವಿದ್ಯುತ್ ಪ್ರಸರಣ ಆಗಿ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಡಯಾಲಿಸಿಸ್ ವೇಳೆ ಶಾಕ್ ಹೊಡೆದಂತಾಗುತ್ತದೆ ಎಂದು ರೋಗಿಗಳು ಹೇಳಿದ್ದಾರಂತೆ. ಈ ಬಗ್ಗೆ ಡಯಾಲಿಸಿಸ್ ವಿಭಾಗ ಸಿಬ್ಬಂದಿ ಜಿಮ್ಸ್ ನಿರ್ದೇಶಕ ಡಾ. ಪಿ ಎಸ್ ಭೂಸರೆಡ್ಡಿ, ಆಡಳಿತಾಧಿಕಾರಿ ಡಾ. ಮ್ಯಾಗೇರಿ, ಡಾ. ಜಿ ಎಸ್ ಪಲ್ಲೇದ ಅವರ ಗಮನಕ್ಕೆ ತಂದಿದ್ದಾರೆ. ಆದರೆ ಇವರು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ ಎಂಬ ಆರೋಪಗಳಿವೆ.