ಗದಗ: ಸಾಧನೆಯ ನೂರಾರು ಕನಸುಗಳನ್ನು ಹೊತ್ತು ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ತನಗೆ ಬೆನ್ನೆಲುಬಾಗಿದ್ದ ತಂದೆ ಇಹಲೋಕ ತ್ಯಜಿಸಿದರು. ಮೊದಲೇ ಬಡತನದಿಂದ ಬೆಂದಿರುವ ಕುಟುಂಬಕ್ಕೆ ಈ ಘಟನೆ ಬರಸಿಡಿಲು ಬಡಿದಂತಾಯಿತು. ಆದ್ರೆ ಮಗಳು ಕನಸು ಕಮರಲಿಲ್ಲ. ಇಂದು ಆ ಮಗಳೇ ಮತ್ತೊಂದು ಸಾಧನಗೈದು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.
ಹೌದು, ನಾವಿಲ್ಲಿ ಹೇಳುತ್ತಿರುವ ಓರ್ವ ಬಡ ವಿದ್ಯಾರ್ಥಿನಿಯ ಬುದ್ಧಿಶಕ್ತಿಯ ಶ್ರೀಮಂತಿಕೆಯ ಬಗ್ಗೆ.. ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದ ವಿದ್ಯಾರ್ಥಿನಿ ತನ್ನ ತಂದೆ ತೀರಿಕೊಂಡ ಬಳಿಕ ಬಡತನ ಬದುಕಿಗೇ ಹೊರತು ಭವಿಷ್ಯತ್ತಿಗೆ ಅಲ್ಲ ಎಂಬಂತೆ ಕಡು ಬಡತನದ ಮಧ್ಯೆಯೂ ಉತ್ತಮ ಅಂಕ ಕಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈ ಮೂಲಕ ಕೂಲಿನಾಲಿ ಮಾಡಿ ಓದಿಸಿದ ತಾಯಿಗೆ ಫಲಿತಾಂಶದ ಕಾಣಿಕೆ ನೀಡಿದ್ದಾಳೆ ದಿಟ್ಟ ವಿದ್ಯಾರ್ಥಿನಿ.
ಧಾರವಾಡದ ಸೃಷ್ಟಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬೆನಕನಕೊಪ್ಪ ಗ್ರಾಮದ ವಿದ್ಯಾರ್ಥಿನಿ ಪ್ರಿಯಾಂಕಾ ರಾಂಪೂರ, ಮೊನ್ನೆ ಬಂದ ಫಲಿತಾಂಶದಲ್ಲಿ ಶೇಕಡಾ 94.33 ರಷ್ಟು ಅಂಕಗಳು ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕನ್ನಡ- 96, ಇಂಗ್ಲಿಷ್- 83, ಭೌತಶಾಸ್ತ್ರ-100, ರಾಸಾಯನ ಶಾಸ್ತ್ರ -93, ಗಣಿತಶಾಸ್ತ್ರ -98, ಜೀವಶಾಸ್ತ್ರ- 96 ಸೇರಿ ಒಟ್ಟು 566 ಅಂಕವನ್ನು ಪಡೆದುಕೊಂಡಿದ್ದಾಳೆ.
ಬಾಲ್ಯದಲ್ಲಿಯೇ ತಂದೆಯ ಅಕಾಲಿಕ ಮರಣದಿಂದ ಕುಂದದೆ, ಮಗಳ ಭವಿಷ್ಯತ್ತಿಗಾಗಿ ಹೋರಾಡುತ್ತಿರುವ ತಾಯಿಗೆ ತಕ್ಕ ಮಗಳಂತೆ ಉತ್ತಮ ಫಲಿತಾಂಶ ಪಡೆಯುವ ಮೂಲಕ ಯಶಸ್ಸಿನ ನಗೆ ಬೀರಿದ್ದಾಳೆ. ಇಷ್ಟೇ ಅಲ್ಲದೆ ಕಳೆದ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿಯೂ 97% ಅಂಕ ಪಡೆಯುವ ಮೂಲಕ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಡಿಎಸ್ ಕೆ ಕರ್ನಾಟಕ ಪಬ್ಲಿಕ್ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಳು.
ಸದ್ಯ ಪ್ರಿಯಾಂಕಾ ತಾಯಿ ಲಲಿತಾ ಅವರು, ಮಗಳು ಭವಿಷ್ಯದ ದೃಷ್ಟಿಯಿಂದ ಗ್ರಾಮದ ರೈತರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ದ್ವಿತೀಯ ಪಿಯುಸಿವರೆಗೆ ಓದಿಸಿದ್ದಾರೆ. ಸದ್ಯ ಎಂಬಿಬಿಎಸ್ ಒದುವ ಹೆಬ್ಬಯಕೆ ಹೊಂದಿರುವ ಪ್ರಿಯಾಂಕಾಳ ಕನಸಿನ ಅಂಕುರಕ್ಕೆ ನೀರೆರೆಯಲು ಸಹಾಯ ಹಸ್ತದ ಅವಶ್ಯಕತೆಯಿದೆ.